ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಹಾಜರಾತಿ ನಿಯಮಿತವಾಗಿರಬೇಕು. ಇನ್ನು ಮುಂದೆ ಕಾನೂನು ವಿದ್ಯಾರ್ಥಿಗಳಿಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸುವುದಾಗಿ ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಈಶ್ವರ ಭಟ್ ಹೇಳಿದರು.
ಅವರು ಕೆಎಲ್ಇ ಸಂಸ್ಥೆಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಹಾಗೂ ಕೆಎಲ್ಇ ಲಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಲಿಂಗರಾಜ ಕೇಂದ್ರ ಸಭಾಗೃಹದಲ್ಲಿ ನಡೆದ ರಾಷ್ಟ್ರಮಟ್ಟದ ಕಾನೂನು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣವು ವ್ಯಾಪಾರೀಕರಣವಾಗಬಾರದು. ಶಿಕ್ಷಣವನ್ನು ತಲಸ್ಪರ್ಶಿಯಾಗಿ ಅಧ್ಯಯನಿಸುವುದರ ಮೂಲಕ ಜೀವನವನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ. ಕಾನೂನು ಶಿಕ್ಷಣವು ಇಂದು ಜಾಗತಿಕವಾಗಿ ವಿಸ್ತರಿಸಿದೆ. ಹಲವಾರು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇಂತಹ ಮೌಲಿಕವಾದ ಶಿಕ್ಷಣವನ್ನು ಆಳವಾಗಿ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ತೆಗೆಯಬೇಕು. ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಆರಂಭದಲ್ಲಿಯೇ ಹೆಚ್ಚು ಅಧ್ಯಯನ ಮಾಡಿದರೆ ಮುಂದಿನ ವೃತ್ತಿ ಜೀವನದಲ್ಲಿ ಅಗಾಧವಾದುದನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ತಪ್ಪದೇ ಉಪನ್ಯಾಸಗಳನ್ನು ಆಲಿಸುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
ಕೆಎಲ್ಇ ಸಂಸ್ಥೆಯು ನೂರುವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ಶಿಕ್ಷಣ ಪ್ರಸಾರದಲ್ಲಿ ನಾಡಿಗೆ ತನ್ನದೇ ಆದ ವಿಶೇಷವಾದ ಕೊಡುಗೆ ನೀಡಿದೆ. ಕಾನೂನು ಸೇರಿದಂತೆ ಎಲ್ಲ ಪ್ರಕಾರದ ಶಿಕ್ಷಣವನ್ನು ನೀಡಿ ದೇಶದ ಗಮನ ಸೆಳೆದಿದೆ. ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಕೆಎಲ್ಇ ಕೊಡುಗೆ ಅನುಪಮವೆಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಾರ್ಕೌನ್ಸಿಲ್ ಕಾರ್ಯಾಧ್ಯಕ್ಷ ಹಾಗೂ ನ್ಯಾಯವಾದಿ ಕೆ.ಬಿ.ನಾಯಕ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ ಆರೋಗ್ಯಕರವಾಗಿರಬೇಕು. ಪ್ರತಿಯೊಬ್ಬರು ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ತೋರಿಸಬೇಕೆಂದು ಹೇಳಿದರು.
ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ನ್ಯಾಯವಾದಿ ಎಸ್.ಎಸ್.ಕಿವಡಸಣ್ಣವರ ಮಾತನಾಡಿ, ಈ ಕಾನೂನು ಉತ್ಸವ ನಿಮ್ಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಳ್ಳಬೇಕೆಂದರು.
ನ್ಯಾಯವಾದಿ ಹಾಗೂ ಬೆಲ್ಲದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ರಾಜೇಂದ್ರ ಬೆಲ್ಲದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾಶ್ರೀ ನಾಯಕ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಯಸಿಂಹ ಸ್ವಾಗತಿಸಿದರು. ಪ್ರೊ. ವಿ.ವಿ.ಮುರದಂಡೆ ಪರಿಚಯಿಸಿದರು. ಡಾ.ಶಾರದಾ ಪಾಟೀಲ ಕಾನೂನು ಅಕಾಡೆಮಿಯ ವಾರ್ಷಿಕ ವರದಿ ವಾಚಿಸಿದರು. ಮಾಣಿಕ ನೇಸರಕರ್ ನಿರೂಪಿಸಿದರು. ಪ್ರೊ.ಅಶ್ವಿನಿ ಪರಬ್ ವಂದಿಸಿದರು. ಮೂರು ದಿನಗಳ ಕಾಲ ನಡೆಯುವ ಕಾನೂನು ಉತ್ಸವದಲ್ಲಿ ರಾಷ್ಟ್ರದ ೨೨ಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಆಗಮಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ