ಬಡ ಕಾರ್ಮಿಕ ಎರಡೇ ವರ್ಷಕ್ಕೆ ಹತ್ತು ವರ್ಷ ಹೆಚ್ಚಾದಂತೆ ಕಾಣಿಸುತ್ತಿದ್ದ…
ಮೊನ್ನೆ ಸಾಯಂಕಾಲ ಆಫೀಸಿಗೆ ಬಂದಾತ ” ನಾನು ಸಿದ್ದಪ್ಪ ಈಗ ಎರಡು ವರ್ಷ ಮೊದಲು ವಾಲೆಂಟಿಯರ್ ರಿಟಾಯರ್ಮೆಂಟಿಗೆ ನಿಮ್ಮ ಕಡೆ ಅರ್ಜಿ ಬರೆಯಿಸಿ ಕೊಂಡು ಹೋಗಿದ್ದೆ ಅಲ್ವ ಮೇಡಂ” ಅಂದ, ಪಾಪ ಎರಡು ವರ್ಷದಲ್ಲಿ ಹತ್ತು ವರ್ಷ ವಯಸ್ಸಾದವನಂತೆ ಕಾಣಿಸಿದ ಸಿದ್ದಪ್ಪ.
ಸಾರಿಗೆ ಸಂಸ್ಥೆಯಲ್ಲಿ ಖಾಯಂ ನೌಕರನಾಗಿದ್ದ ಸಿದ್ದಪ್ಪನದು 30ವರ್ಷಗಳ ಸ್ವಚ್ಛ ಸೇವೆ. ಒಂದೇ ಒಂದು ದೂರು ಕೂಡ ವರದಿಯಾಗದಂತೆ ಸೇವೆ ಸಲ್ಲಿಸಿದ್ದ ಈತನಿಗೆ, ಮಕ್ಕಳಿಬ್ಬರೂ ದೂರದ ಊರಿನಲ್ಲಿ ನೆಲೆ ನಿಂತಾಗ ಹೆಂಡತಿ ಒಂಟಿತನದಿಂದ ಬಳಲುತ್ತಿದ್ದಾಳೆಂದು ಅರಿತು ಕೆಲಸಕ್ಕೆ ಸ್ವಯಂ ಘೋಷಿತ ನಿವೃತ್ತಿ ಪಡೆದಿದ್ದ.
ಸಾಮಾನ್ಯವಾಗಿ ಹೆಂಡತಿ ಒಂಟಿತನದ ಬಗ್ಗೆ ಹೇಳಿದರೆ, “ನೀನು ಪ್ರಾಣಾಯಾಮ ಮಾಡು, ಒಳ್ಳೇ ಕಡೆ ಕೌನ್ಸಿಲಿಂಗ್ ಹೋಗು, ಟೀವಿ ನೋಡೋದ ಕಡಿಮೆ ಮಾಡು, ವಾಟ್ಸಪ್ ಬಂದ್ಮಾಡು”, ಇತ್ಯಾದಿ ಸಲಹೆ ಕೊಟ್ಟು ಕಾರಿನ ಬಾಗಿಲನ್ನ ಧಡಾರನೆ ಹಾಕಿಕೊಂಡು ಬಾಯ್ ಎಂದು ಕೈಬೀಸಿ ಹೋಗುವ ಸಿವಿಲೈಸ್ಡ್ ಸೊಸಾಯ್ಟಿಯ ಸಾಹೇಬರುಗಳಿಗಿಂತ ಈ ಸಿದ್ದಪ್ಪ ನನ್ನ ಕಣ್ಣಿಗೆ ಭಿನ್ನವಾಗಿ ಕಂಡಿದ್ದ.
ಏನಾದರೂ ಸಮಸ್ಯೆನಾ ಅಂತ ಕೇಳಿದ್ದಕ್ಕೆ ಪಿ ಎಫ್ ಬಂದಿಲ್ಲ ಅಂದ, ಯಾಕೆ? ನನ್ನ ಪಿಎಫ್ ಎಕೌಂಟ್ ನಂ ಬೇರೆ, ಹಣ ಜಮಾ ಆಗಿರೋ , ನಂ ಬೇರೆ ಅಂದ. ನಿಮ್ಮ ಡಿಪಾರ್ಟಮೆಂಟ್ ಕಡೆಯಿಂದ ಪಿ ಎಫ್ ಆಫೀಸಿಗೆ ಒಂದು ಅರ್ಜಿ ಕೊಡಿಸು ಈ ರೀತಿ ಆಗಿದೆ , ನಿನ್ನ ಪಿ ಎಫ್ಎಕೌಂಟ್ಗೆ ಹಣವನ್ನ ಟ್ರಾನ್ಸಫರ್ ಮಾಡಿ ಅಂತ ಬರೆಯಲು ಹೇಳು, “ಅಂತ ಹೇಳಿದೆ?. ಬರೆದಿದ್ದಾರೆ , ಅದಕ್ಕೆ ಈರೀತಿ ಉತ್ತರ ಬಂದಿದೆ ಅಂತ ಒಂದು ಪತ್ರ ತೋರಿಸಿದ. ಆ ಪತ್ರದ ಪ್ರಕಾರ ಯಾವ ಎಕೌಂಟಿಗೆ ಸಿದ್ದಪ್ಪನ ವೇತನದಲ್ಲಿ ಪಿ ಎಫ್ ಎಂದು ಕಡಿತಗೊಂಡ ಹಣ ಜಮಾ ಆಗಿದೆಯೋ, ಆ ಖಾತೆಯನ್ನು ಹೊಂದಿದ ನೌಕರ ಈಗಾಗಲೇ ನಿವೃತ್ತಿ ಹೊಂದಿ, ಪೂರ್ತಿ ಹಣವನ್ನು ತೆಗೆದುಕೊಂಡಿದ್ದಾನೆ”, ಎಂಬುದಾಗಿತ್ತು.
ಸಿದ್ದಪ್ಪನ 30 ವರ್ಷಗಳ ಸೇವೆಯ ಸರಿಸುಮಾರು 7 ಲಕ್ಷ ರೂಪಾಯಿಗಳು.
ಬಡ ಕಾರ್ಮಿಕ ಎರಡೇ ವರ್ಷಕ್ಕೆ ಹತ್ತು ವರ್ಷ ಹೆಚ್ಚಾದಂತೆ ಕಾಣಿಸುತ್ತಿದ್ದ.
ಮೇ ಮೊದಲದಿನದ ಶುಭಾಷಯಗಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ