ರಾಜ್ಯದಲ್ಲೇ ಟಿಸಿಎಸ್ ಗೆ ಅತಿ ಹೆಚ್ಚು ಅಂದರೆ ೧೮೫ ವಿದ್ಯಾರ್ಥಿಗಳ ಆಯ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿ ಐ ಟಿ )ದ ವಿದ್ಯಾರ್ಥಿಗಳು ಈ ವರ್ಷವೂ ಹಲವು ಸಾಧನೆಗಳನ್ನು ಮಾಡಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು ೬೫೦ ಕ್ಕಿಂತ ಹೆಚ್ಚು ಉದ್ಯೋಗ ಕೊಡುಗೆಗಳ ಜೊತೆ ಕೊನೆಯ ವರ್ಷದ ಶೇ ೮೫ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ಲೇಸಮೆಂಟ್ ಆಗಿದ್ದಾರೆ.
ಜಿಐಟಿ ಆಡಳಿತ ಮಂಡಳಿ ಚೇರಮನ್ ಉದಯ ಕಾಲಕುಂದ್ರಿಕರ್, ಪ್ರಾಚಾರ್ಯ ಆನಂದ ದೇಶಪಾಂಡೆ, ಪ್ಲೇಸ್ ಮೆಂಟ್ ಆಫೀಸರ್ ಸತೀಶ್ ಹುಕ್ಕೇರಿ ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದರು.
ಪ್ರತಿಷ್ಠಿತ ಸಾಫ್ಟ್ ವೆರ್ ಕಂಪನಿ “ಟಾಟಾ ಕನ್ಸಲ್ಟೇನ್ಸಿ ಸೆರ್ವಿಸೆಸ್ (ಟಿ ಸಿ ಎಸ)” ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ೧೮೫ ವಿದ್ಯಾರ್ಥಿಗಳನ್ನು ಜಿಐಟಿಯಿಂದ ಆಯ್ಕೆ ಮಾಡಿದೆ. “ಆಟೊನೊಮಸ್ ಪಠ್ಯಕ್ರಮದ” ಅನುಗುಣವಾಗಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಿಂದ ವಿದ್ಯಾರ್ಥಿ ವೇತನದೊಂದಿಗೆ ಕೈಗಾರಿಕಾ ಇಂಟರ್ನ್ ಶಿಪ್ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.
ಉದ್ಯೋಗಾವಕಾಶವನ್ನು ಪಡೆದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಗರಿಷ್ಠ ೧೨.೪೬ ಲಕ್ಷ ರೂಪಾಯಿ ಒಳಗೊಂಡು ವಾರ್ಷಿಕವಾಗಿ ಸರಾಸರಿ ೪.೫ ಲಕ್ಷದಷ್ಟು ವೇತನದ ಆಫರ್ ನೀಡಿವೆ. ಟಿ ಸಿ ಎಸ್, ಟೆಕ್ಸಾಸ್ ಇನ್ಸ್ಟ್ರಮ್ಮೆಂಟ್ಸ್, ಐ ಬಿ ಎಂ, ಪಿ ಡಬ್ಲ್ಯೂ ಸಿ, ಟಾಟಾ ಟೆಕ್ನಾಲಾಜಿಸ್, ಮೆರ್ಸಿಡೀಜ್ ಬೆಂಜ್, ಟಾಟಾ ಮೋಟರ್ಸ್, ಜನರಲ್ ಎಲೆಕ್ಟ್ರಿಕಲ್, ಬ್ರಿಲ್ಲಿಯೋ, ವಿಪ್ರೊ, ಇನ್ಫೋಸಿಸ್, ಬಾಸ್, ಕಿರ್ಲೋಸ್ಕರ್ ಫೆರ್ರಸ್, ಆಕ್ಸಿಸ್ ಬ್ಯಾಂಕ್, ಡೆಕಥಾನ್, ಮೈಂಡ್ ಟ್ರೀ ಹೀಗೆ ಒಟ್ಟು ೭೫ ಕ್ಕಿಂತ ಬಹುರಾಷ್ಟ್ರೀಯ ಕಂಪನಿಗಳು ಪ್ರತಿ ವರ್ಷ ಜಿ ಐ ಟಿ ಗೆ ಭೇಟಿ ಕೊಟ್ಟು ಕ್ಯಾಂಪಸ್ ಸಂದರ್ಶನದಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತವೆ.
ಹೀಗೆ ಆಯ್ಕೆಯಾಗುವ ವಿದ್ಯಾರ್ಥಿಗಳು ಮಹಾವಿದ್ಯಾಲಯವೇ ನಡೆಸುವ ಕಠಿಣ ತರಬೇತಿಯನ್ನು ಪಡೆದಿರುತ್ತಾರೆ. ಈ ತರಬೇತಿಯನ್ನು ಜಿ ಐ ಟಿ ಇಂಜಿನಿಯರಿಂಗ್ ಪದವಿಯ ೨ ನೇ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರಲ್ಲಿ ತಾಂತ್ರಿಕ ಸಾಮರ್ಥ್ಯಗಳ ಮತ್ತು ಭಾಷಾ ಮತ್ತು ಸಂವಹನ ಕೌಶಲ್ಯತೆ ಕುರಿತು ವ್ಯಾಪಕ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ. ವಿದ್ಯಾರ್ಥಿಗಳು ಕೇಂಬ್ರಿಡ್ಜ್ ಮತ್ತು ಇತರ ವೃತ್ತಿಪರ ಸಂಸ್ಥೆಗಳ ಮೂಲಕ ಇಂಗ್ಲೀಷ್ ನಲ್ಲಿ ವಿಶೇಷ ತರಬೇತಿಯನ್ನು ಪಡೆದಿರುತ್ತಾರೆ. ಹಾಗೆಯೇ ಅತಿ ಅವಶ್ಯಕತೆ ಇರುವ ಅಂಶ ” ಭೌದ್ಧಿಕ ಆಸ್ತಿ ಹಕ್ಕು” ವಿಷಯದ ಬಗ್ಗೆಯೂ ಅರಿವು. ಅದಕ್ಕಾಗಿಯೇ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ ಎಸ ಸಿ ಎಸ್ ಟಿ ) ಸಹಯೋಗದಲ್ಲಿ “ಭೌದ್ಧಿಕ ಆಸ್ತಿ ಹಕ್ಕು” ಕೇಂದ್ರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಕೋರ್ಸ್ ಮೂಲಕ ಅರಿವು ಕೊಡುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಪ್ರತಿಫಲವೆಂಬಂತೆ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಗಳಿಗೆ ಏಳು ಪೇಟೆಂಟ್ ಗಳಿಗೆ ಅರ್ಜಿ ಹಾಕಿದ್ದಾರೆ ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಮಹಾವಿದ್ಯಾಲಯವೇ ಭರಿಸಿದೆ.
ವಿಟಿಯು ಘಟಿಕೋತ್ಸವದಲ್ಲಿ ಸಾಧನೆ
ಇತ್ತೀಚಿಗೆ ನಡೆದ ವಿ ಟಿ ಯು ೧೮ನೇ ಘಟಿಕೋತ್ಸವದಲ್ಲಿ ಹನ್ನೊಂದು ರ್ಯಾಂಕ್ ಮತ್ತು ಒಂದು ಗೋಲ್ಡ್ ಮೆಡಲ್ ದೊಂದಿಗೆ ಉತ್ತರಕ ಕರ್ನಾಟಕದಲ್ಲೇ ಪ್ರಥಮ ಮತ್ತು ರಾಜ್ಯದಲ್ಲೇ ೪ ನೇ ಸ್ಥಾನ ಪಡೆದು ಜಿ ಐ ಟಿ ಗಮನಾರ್ಹ ಸಾಧನೆ ಮಾಡಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಜಿ ಐ ಟಿ ಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ಕೋಟಾದಡಿ ಕೆಲವು ಸೀಟ್ ಗಳನ್ನೂ ವಿಶೇಷ ಶುಲ್ಕ ವಿನಾಯಿತಿಯೊಂದಿಗೆ ಕಾಯ್ದಿರಿಸಲಾಗಿದೆ. ಹಾಗೆಯೇ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಮಕ್ಕಳಿಗೂ ಸಹ ಸೀಟ್ ಗಳನ್ನೂ ಕಾಯ್ದಿರಿಸಲಾಗಿದೆ. ಹಾಗೆಯೇ ಇಂಜಿನಿಯರಿಂಗ್ ಪ್ರವೇಶಕ್ಕೆ ರಾಜ್ಯ ಸರ್ಕಾರ ನಡೆಸುವ ಪ್ರವೇಶ ಪರೀಕ್ಷೆ ಸಿ ಇ ಟಿ ಯಲ್ಲಿ ಅತ್ತ್ಯುತ್ತಮ ಸ್ಥಾನವನ್ನು ಪಡೆದು ಜಿ ಐ ಟಿ ಯಲ್ಲಿ ಪ್ರವೇಶ ಪಡೆದರೆ ಅನಾಥ ಪ್ರತಿಭಾವಂತ ವಿದ್ಯಾರ್ಥಿಗಳೊಗೆ ಶುಲ್ಕ ರಿಯಾಯಿತಿ ಇರುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ