ಪ್ರಗತಿವಾಹಿನಿ ಸುದ್ದಿ, ತಡಸ
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಯುಗಾದಿ ಪರ್ವ ಕಾಲದಲ್ಲಿ ತಮ್ಮ ಗುರು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಆಶಿರ್ವಾದ ಪಡೆದರು.
ಮಳಲಿಮಠ, ಸುಳ್ಳದ ಸ್ವಾಮಿಗಳು ಸೇರಿದಂತೆ ಅನೇಕರ ಸಮ್ಮುಖದಲ್ಲಿ, ಹುಬ್ಬಳ್ಳಿ ಹತ್ತಿರದ ಧರ್ಮನಿವಾಸ ತಡಸದ, ತಿರುಮಲಕೊಪ್ಪದಲ್ಲಿ ಗುರು-ಶಿಷ್ಯರ ಈ ಅಪೂರ್ವ ಸಂಗಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಂಭಾಪುರಿ ಜಗದ್ಗುರುಗಳು, ಗುರು ಶಿಷ್ಯರಲ್ಲಿ ಅವಿನಾಭಾವ ಸಂಬಂಧ ಇರುತ್ತದೆ. ಇಡೀ ವರ್ಷ ಸಾಮಾಜಿಕ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸುವಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಯುಗಾದಿಯ ಪರ್ವಕಾಲದಲ್ಲಿ ಬಂದು ಆಶೀರ್ವಾದ ಪಡೆದಿರುವುದು ನಮಗೆ ತುಂಬಾ ಅಭಿಮಾನ ಎನಿಸುತ್ತದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ 65 ಸಾವಿರ ಮಕ್ಕಳಿಗೆ ಅಕ್ಷರ ದಾಸೋಹವನ್ನು ನೀಡುವುದು ಅಷ್ಟೇ ಅಲ್ಲ, ರೈತನಿಗೆ ಶತ್ರುವಾಗಿ ನಿಂತಿರುವ ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿ ಮಾಡಲು ಈಗಾಗಲೇ ಕರ್ನಾಟಕ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಬಟ್ಟೆ ಚೀಲಗಳನ್ನು ವಿತರಿಸಿರುವುದು ನಿಜಕ್ಕೂ ಕೂಡ ಒಬ್ಬ ಮಠಾಧೀಶನಿಗೆ ಇರುವ ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತದೆ ಎಂದರು.
ಅಷ್ಟೇ ಅಲ್ಲದೆ 5000 ಗುಬ್ಬಿ ಗೂಡುಗಳನ್ನು ನೀಡುವುದರ ಮುಖಾಂತರ ಪಕ್ಷಿಗಳ ರಕ್ಷಣೆ ಗೂ ಕೂಡ ತಮ್ಮನ್ನು ತಾವು ತೊಡಗಿಸಿ ಕೊಂಡಿರುವುದು ಅಭಿಮಾನದ ಸಂಗತಿ. ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದ ಸಂದರ್ಭದಲ್ಲಿ ದೇಹದಾನವನ್ನು ಮಾಡಿಸುವುದರ ಮುಖಾಂತರ ಅದ್ಭುತ ಕ್ರಾಂತಿಯನ್ನು ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಆಶೀರ್ವಾದವನ್ನು ಪಡೆದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನನಗೆ ಸ್ಪೂರ್ತಿಯಾಗಿ ನಿಂತವರು ರಂಭಾಪುರಿ ಜಗದ್ಗುರುಗಳು. ಏನೇ ಮಾಡಲಿ ಅದಕ್ಕೆ ಪರಿಪೂರ್ಣವಾದ ಆಶೀರ್ವಾದವನ್ನು ನೀಡುತ್ತಾ ಬಂದಿದ್ದಾರೆ. ಶಿಷ್ಯನಾದವನಿಗೆ ಮಾತ್ರ ಒಬ್ಬ ಗುರುವಾಗಲಿಕ್ಕೆ ಸಾಧ್ಯ. ರಂಭಾಪುರಿ ಜಗದ್ಗುರುಗಳ ಆತ್ಮೀಯ ಶಿಷ್ಯ ಎಂದು ಹೇಳಲು ನನಗೆ ಅಭಿಮಾನ ಎನಿಸುತ್ತದೆ. ಅವರ ಆಶೀರ್ವಾದ ಶ್ರೀರಕ್ಷೆ ನನ್ನ ಮೇಲೆ ಸದಾ ಇರಲಿ ಎಂದು ಬೇಡಿಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ