Latest

ಜನವಸತಿ ಪ್ರದೇಶದಲ್ಲಿ ಚಿರತೆ ಸಂಚಾರ: ಕೆರಳಿಸದಿರಲು ಸೂಚನೆ

ಕೆರಳಿಸದಿರಲು ಅರಣ್ಯ ಇಲಾಖೆ ಸೂಚನೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲೂಕಿನ ಹಿರೇ ಅಂಗ್ರೊಳ್ಳಿ, ಚಿಕ್ಕ ಅಂಗ್ರೊಳ್ಳಿ, ಕಡತನ ಬಾಗೇವಾಡಿ, ಬೇಕವಾಡ, ಮುಗಳಿಹಾಳ ಹಾಗೂ ಸುತ್ತಲಿನ ಜನನಿಬಿಡ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಎರಡು ಚಿರತೆಗಳು ಸಂಚರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿದ್ದು, ಆಹಾರ ಅರಸಿ ಕೃಷಿ ಭೂಮಿಗಳತ್ತ ಬಂದ ಚಿರತೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು ಎಂದು ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಕೋರಿದೆ.
ಎರಡು ಚಿರತೆಗಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅರಣ್ಯ ಅಥವಾ ಖಾನಾಪುರದ ಭೀಮಗಡ ಅರಣ್ಯದಿಂದ ಆಹಾರ ಮತ್ತು ನೀರು ಅರಸಿ ನಾಡಿಗೆ ಬಂದಿರುವ ಸಾಧ್ಯತೆಯಿದೆ. ಇದುವರೆಗೂ ಈ ಚಿರತೆಗಳು ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದ ಕೋತಿಗಳನ್ನು ಮತ್ತು ನವಿಲುಗಳನ್ನು ಬೇಟೆಯಾಡಿದ ವರದಿಯಾಗಿದೆ. ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗಳು ಇದುವರೆಗೂ ಯಾರಿಗೂ ಕಾಣಿಸಿಕೊಂಡಿಲ್ಲ. ಯಾರಿಗೂ ತೊಂದರೆ ಮಾಡಿಲ್ಲ. ಹೀಗಾಗಿ ರೈತರು ಚಿರತೆಗಳ ಬಗ್ಗೆ ಭಯಪಡಬಾರದು. ಚಿರತೆ ಸಂಚರಿಸಿದೆ ಎನ್ನಲಾದ ಹಿರೇ ಅಂಗ್ರೊಳ್ಳಿ, ಚಿಕ್ಕ ಅಂಗ್ರೊಳ್ಳಿ ಹಾಗೂ ಸುತ್ತಲಿನ ಭಾಗದ ಕೃಷಿ ಭೂಮಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಕೆಲವು ಕೃಷಿ ಭೂಮಿಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಗೋಚರಿಸಿದ್ದು, ಬೀಡಿ ಹಾಗೂ ಬೇಕವಾಡ ಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗಿ ಚಿರತೆಯ ಚಲನವಲನಗಳ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದು ಇಲಾಖೆಯ ಎಸಿಎಫ್ ಸಿ.ಬಿ ಪಾಟೀಲ ಮಾಹಿತಿ ನೀಡಿದ್ದಾರೆ.

Related Articles

Back to top button