Latest

ಜೈನ್ ಕಂಪನಿ ಹಠಾವೋ, ಗೋಕಾಕ ಬಚಾವೋ…

   ೨೪/೭ ಕುಡಿಯುವ ನೀರಿನ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಜನಾಕ್ರೋಶ.!

 

 

   

 

    ಪ್ರಗತಿವಾಹಿನಿ ಸುದ್ದಿ, ಗೋಕಾಕ

ಇಲ್ಲಿಯ ನಗರಸಭೆ ಸಭಾ ಭವನದಲ್ಲಿ ನಡೆದ ೨೪/೭ ಕುಡಿಯುವ ನೀರಿನ ಯೋಜನೆಯ ಪರಿಶೀಲನಾ ಸಭೆಯಲ್ಲಿ ನಗರಸೇವಕರು, ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು, ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿಗಳು ಗೋಕಾಕ ನಗರದ ೨೪/೭ ಕುಡಿಯುವ ನೀರಿನ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಜಿಲ್ಲಾಧಿಕಾರಿಯವರು ಜೈನ್ ಇರಿಗೇಶನ್ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ತಕ್ಷಣ ಗೋಕಾಕ ಸಾರ್ವಜನಿಕರು ಹಾಗೂ ನಗರಸೇವಕರ ಜೊತೆಗೆ ಸಭೆ ನಡೆಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರದ ನಗರಸಭೆ ಸಭಾಭವನದಲ್ಲಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಸೇರಿದ ನಗರಸೇವಕರು, ಸಾರ್ವಜನಿಕರು ೨೪/೭ ಕುಡಿಯುವ ನೀರಿನ ಯೋಜನೆಯಿಂದ ಸರಿಯಾದ ಶುದ್ಧ ಕುಡಿಯುವ ನೀರು ಸರಬರಾಜು ಏಕೆ ಆಗುತ್ತಿಲ್ಲ. ಹಾಗೂ ೨೪ ಗಂಟೆ ನಿರಂತರ ನೀರು ಸರಬರಾಜು ಮಾಡುತ್ತೆವೆ ಎಂದು ಕಾಮಗಾರಿ ಕೈಗೊಂಡಿದ್ದಿರಿ. ಈವರೆಗೆ ನಗರದಲ್ಲಿ ೨೪ಗಂಟೆ ನೀರು ಸರಬರಾಜು ಆಗುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ ನಗರಸೇವಕರ ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾಗಿದ್ದರು.

ಮತ್ತೊಬ್ಬ ನಗರಸೇವಕ ರಾತ್ರಿ ೧೨ ಗಂಟೆ ಸಮಯದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು. ತಮ್ಮ ಒತ್ತಡದ ಕೆಲಸದ ಮಧ್ಯದಲ್ಲೂ ರಾತ್ರಿ ಇಡಿ ಸಮಯ ವ್ಯರ್ಥ ಮಾಡಿ ನಿದ್ದೆ ಇಲ್ಲದೆ ನಗರಸೇವಕರನ್ನು ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಕಚೇರಿಗೂ ಹಲವು ಬಾರಿ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈವರೆಗೆ ಜೈನ್ ಇರಿಗೇಶನ್ ಕಂಪನಿಯ ವಿರುದ್ಧ ಮೇಲಾಧಿಕಾರಿಗಳು ಕಠಿಣ ಕ್ರಮಕೈಗೊಂಡಿಲ್ಲವೇಕೆ ಎಂದು ಹರಿಹಾಯ್ದರು.

ನಿನ್ನೆ ನಡೆದ ಜಿಲ್ಲಾಧಿಕಾರಿಯವರ ಸಭೆಯಲ್ಲಿ ಒಟ್ಟು ೫ ಭಾಗಗಳನ್ನಾಗಿ ಮಾಡಿ, ಇದರಲ್ಲಿ ಈಗಾಗಲೇ ನಾಲ್ಕು ಭಾಗಗಳ ಸಂಪೂರ್ಣ ಕಾಮಗಾರಿ ಮುಗಿದಿದೆ ಎಂದು ಉತ್ತರಿಸಿದ್ದ ಜೈನ್ ಇರಿಗೇಶನ್ ಕಂಪನಿಯ ಇಂಜನೀಯರ್ ಪ್ರಕಾಶ ಅಳವಾಡೆ ವಿರುದ್ಧ ಕೆಲವು ನಗರಸೇವಕರು, ಎಲ್ಲಿ ತಮ್ಮ ಕಾಮಗಾರಿ ಸಂಪೂರ್ಣವಾಗಿದೆ? ಜನರ ಮಧ್ಯೆ ಬಂದು ತಾವು ಮಾಡಿದ ಶೇ.೭೫ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿ ಸುಳ್ಳು ಹೇಳಿ ಸರಕಾರಕ್ಕೆ ಮೋಸ ಮಾಡುವುದಲ್ಲದೆ, ನಗರದ ಸಾರ್ವಜನಿಕರಿಂದ ಹಗಲು ದರೋಡೆ ಮಾಡುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದರು.

ಸರಿಯಾದ ಸಮಯಕ್ಕೆ ನೀರು ಬಾರದೇ ಇರುವುದು, ಕಡಿಮೆ ಫ್ರೆಷರ್ ನೀರು ಬರುತ್ತಿರುವುದರಿಂದ ನೀರಿನ ಬಿಲ್ಲು ಜಾಸ್ತಿ ಬರುತ್ತಿದೆ. ಅಲ್ಲದೇ ಪೈಪ್‌ಗಳಲ್ಲಿ ಗಾಳಿ ತುಂಬಿ ನೀರು ಬಾರದೇ ಮೀಟರ್‌ಗಳು ತಿರುಗುತ್ತಲೆ ಇವೆ. ಇದರ ಬಗ್ಗೆ ಜೈನ್ ಇರಿಗೇಶನ್ ಕಂಪನಿಯವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

೨೪/೭ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಾರಂಭವಾಗಿ ಹಲವಾರು ವರ್ಷಗಳಾಗಿವೆ. ಕಾಮಗಾರಿಗಾಗಿ ನಗರದ ರಸ್ತೆಗಳನ್ನು ಅಗೆದು ಹಾಗೇ ಬಿಟ್ಟಿದ್ದು ಸದ್ಯ ಸಾರ್ವಜನಿಕರಿಗೆ ವಾಹನ ಸವಾರರಿಗೆ ಮೃತುಕೂಪಗಳಾಗಿವೆ. ಪೈಪಗಳು ಒಡೆದು ಸರಿಯಾಗಿ ನೀರು ಸರಬರಾಜು ಆಗದೇ ಕೆಲವೆಡೆ ನೀರು ಚರಂಡಿ ಪಾಲಾಗುತ್ತಿದೆ. ನೀರನ್ನು ಶುದ್ಧಿಕರಿಸದೇ ಮಣ್ಣು ಮಿಶ್ರಿತ ನೀರು ಸರಬರಾಜು ಮಾಡುತ್ತಿರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಅವರ ಚಿಕಿತ್ಸೆಗೆ ಹಣ ನೀಡುವಿರಾ? ಎಂದು ಮುಖಂಡರೊಬ್ಬರು ಪ್ರಶ್ನಿಸಿದರು.

 

ಜೈನ್ ಕಂಪನಿ ಹಠಾವೋ ಗೋಕಾಕ ಬಚಾವೋ , ಸಭೆ ಬಹಿಷ್ಕಾರ

೨೪/೭ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕವಾಗಿದ್ದು ಕಾಮಗಾರಿ ಸಂಪೂರ್ಣ ವಿಫಲವಾಗಿದೆ ಎಂದು ನಗರಸಭೆ ಸದಸ್ಯರು ಹಾಗೂ ಮುಖಂಡರು ಸಭೆಯಲ್ಲಿ ಕೆಂಡಾಮಂಡಲವಾದರು.
ಕಳೆದ ಹಲವು ವರ್ಷಗಳಿಂದ ಪೂರ್ಣಗೊಳ್ಳದೇ ಇರುವ ಕಾಮಗಾರಿಯನ್ನು ಜೈನ್ ಇರಿಗೇಶನ್ ಕಂಪನಿಯವರು ಸಮಯಾವಕಾಶ ಕೇಳುತ್ತ ಬರುತ್ತಿದ್ದಾರೆ ಹೊರತು ಕಾಮಗಾರಿ ಪೂರ್ಣ ಮಾಡುವಲ್ಲಿ ವಿಫಲರಾಗಿದ್ದಾರೆ ಹೀಗಾಗಿ ನಗರದ ಜನತೆ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಈ ಕೂಡಲೇ ನಗರಸಭೆಗೆ ಕಾಮಗಾರಿ ಹಸ್ತಾಂತರಿಸಿ ಜೈನ್ ಇರಿಗೇಶನ್ ಕಂಪನಿಯವರು ತೊಲಗಬೇಕು. ಇಲ್ಲವಾದಲ್ಲಿ ಜೈನ್ ಕಂಪನಿ ಹಠಾವೋ ಗೋಕಾಕ ಬಚಾವೋ ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ. ಜೆ. ಸೆಂದೂರೆ, ಕಾರ್ಯಪಾಲಕ ಅಭಿಯಂತರ ವಿ. ಎನ್. ಹಾದಿಮನಿ, ಹುಬ್ಬಳ್ಳಿಯ ವಲಯ ವ್ಯವಸ್ಥಾಪಕ ವಿ. ಬಿ. ಚಂದ್ರಶೇಖರ್, ಸಹಾಯಕ ಅಭಿಯಂತರ ಎನ್. ಡಿ. ಭಗವತಿ, ಜೈನ್ ಇರಿಗೇಶನ್ ಕಂಪನಿಯ ಪ್ರೊಜೆಕ್ಟ ಮ್ಯಾನೇಜರ್ ಪ್ರಕಾಶ ಅಳಗವಾಡಿ, ಬೆಳಗಾವಿ ಎಸ್‌ಡಿಒ ಕೆ. ಭಿಮಪ್ಪ, ಪೌರಾಯುಕ್ತ ಎಮ್. ಎಚ್. ಅತ್ತಾರ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿ. ಎಸ್. ತಡಸಲೂರ ಸೇರಿದಂತೆ ನಗರಸಭೆ ಅಧಿಕಾರಿಗಳು, ನಗರಸೇವಕರು, ಸಾರ್ವಜನಿಕರು ಸಭೆಯಲ್ಲಿ ಭಾಗಿಯಾಗಿದ್ದರು.

 

ಗೋಕಾಕ ನಗರದ ಪಕ್ಕದಲ್ಲೆ ಜೀವನದಿ ಘಟಪ್ರಭೆ ಹಾಯ್ದು ಹೋಗಿದೆ. ಆದರೆ ೨೪/೭ ಕುಡಿಯುವ ನೀರಿನ ಯೋಜನೆಯಿಂದ ನಲ್ಲಿಗಳಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಿದೆ. ಈ ಬಗ್ಗೆ ನಗರಸಭೆ ಸದಸ್ಯರ ಗಮನಕ್ಕೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಣ್ಣು ಮಿಶ್ರಿತ ನೀರನ್ನು ಸೇವಿಸಿ ಸಾರ್ವಜನಿಕರು ಕಾಲರಾ, ಮಲೇರಿಯಾ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
-ಮಲ್ಲಿಕಾರ್ಜುನ ಹೊಸಮಠ, ಸೋಮವಾರ ಪೇಠೆಯ ನಿವಾಸಿ.

ನಗರದಲ್ಲಿ ಪ್ರಗತಿಯಲ್ಲಿರುವ ೨೪/೭ ನೀರಿನ ಸರಬರಾಜು ಯೋಜನೆ ಕುರಿತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದ್ದು, ಸಧ್ಯ ನಗರಸೇವಕರ ಅಹವಾಲು ಸ್ವೀಕರಿಸಿದ್ದೆನೆ. ಜಿಲ್ಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಸಮಸ್ಯೆಯ ಬಗ್ಗೆ ಸಂಪೂರ್ಣ ವರದಿ ನೀಡಲಾಗುವದು.
-ಕಾರ್ಯಪಾಲಕ ಅಭಿಯಂತರ ವಿ ಎನ್ ಹಾದಿಮನಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button