ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವ ಮೂಲಕ ಬಲಿಷ್ಠ ಪ್ರಜಾಪ್ರಭುತ್ವವನ್ನು ಬೆಳೆಸುವ ಮತ್ತು ಉಳಿಸುವ ಜವಾಬ್ಧಾರಿಯನ್ನು ಮೆರೆಯಬೇಕು ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನ್ ಅವರು ಹೇಳಿದರು.
ಇಂದು ನಗರದ ಭಾರತೀಯ ವಿದ್ಯಾಭವನದಲ್ಲಿ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬಿ-ಪ್ಯಾಕ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ನಾನು ಪ್ರಜಾಪ್ರಭುತ್ವದ ರಾಯಭಾರಿ, ನೀವು?” ಎಂಬ ಮತದಾರರ ಜಾಗೃತಿ ಕಾರ್ಯಗಾರದಲ್ಲಿ ಅವರು ಮಾತನಾಡಿ ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಯೋಧರಾಗಿ ಎಂದು ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೂತ್ ಮಟ್ಟಗಳಲ್ಲಿ ಮತದಾನವನ್ನು ಪ್ರೋತ್ಸಾಹಿಸಲು ಹಾಗೂ ದಿವ್ಯಾಂಗರ ಸಹಾಯಕ್ಕಾಗಿ ಸ್ಥಳೀಯರನ್ನೊಳಗೊಂಡ ಸಮಿತಿಗಳನ್ನು ಬಳಸಿಕೊಳ್ಳಲು ಚುನಾವಣಾ ಅಯೋಗ ಯೋಜಿಸಿದೆ.
ಜನರಲ್ಲಿ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಆಯೋಗದ ಮುಖ್ಯ ಉದ್ದೇಶಗಳಲ್ಲೊಂದಾಗಿದೆ, ರಾಜ್ಯಾದ್ಯಂತ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಬಿ.ಬಿ.ಎಮ್.ಪಿ ಚುನಾವಣೆ ಸಹಾಯಕ ಆಯುಕ್ತರಾದ ಡಾ.ನಟೇಶ್ ಡಿ.ಬಿ ಅವರು ಮಾತನಾಡಿ ಚುನಾವಣೆ ನಡೆಯುವ ರೀತಿ ಹಾಗೂ ಚುನಾವಣಾಧಿಕಾರಿಗಳ ಜವಬ್ಧಾರಿಯನ್ನು ವಿವರಿಸಿದರು.
ಬಿ-ಪ್ಯಾಕ್ ಸಂಸ್ಥೆಯ ಪ್ರತಿನಿಧಿ ಆನಂದ್ ತೀರ್ಥ ಅವರು ಮಾತನಾಡಿ ಮತದಾರರ ಜಾಗೃತಿ ಕುರಿತು ತಮ್ಮ ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳನ್ನು ವಿವರಿಸಿದರು.
ಕಾರ್ಯಗಾರದ ಕೊನೆಯಲ್ಲಿ ಸಂವಾದವನ್ನು ಸಹ ಹಮ್ಮಿಕೊಳ್ಳಲಾಗಿತ್ತು, ಚುನಾವಣೆ ಕುರಿತು ನೆರೆದಿದ್ದ ಅನೇಕರು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರ ಪಡೆದುಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ