ಪ್ರಗತಿವಾಹಿನಿ ಸುದ್ದಿ, ಬಂಡಿಪುರ:
ಕಳೆದ ಮೂರು ದಿನಗಳ ಹಿಂದೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಬಿಸಿಲಿನ ಧಗೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತು ಗಾಳಿಯೂ ಜೋರಾಗಿ ಬೀಸುತ್ತಿರುವುದರಿಂದ ಬೆಂಕಿ ಮತ್ತಷ್ಟು ವ್ಯಾಪಿಸುತ್ತಿದೆ.
ಅರಣ್ಯ ಇಲಾಖೆ ವಲಯ ಕಚೇರಿ ಪ್ರದೇಶ ಮತ್ತು ಬಂಡೀಪುರ ಸಫಾರಿ ವಲಯಕ್ಕೂ ವ್ಯಾಪಿಸಿದ್ದು, ಹತ್ತಾರು ಸಾವಿರ ಎಕರೆ ಅರಣ್ಯ ಹೊತ್ತಿ ಉರಿದಿದೆ. ಇದರಿಂದಾಗಿ ಮೈಸೂರು -ಊಟಿ ಸಂಚಾರವನ್ನು ಬಂದ್ ಮಾಡಲಾಗಿದೆ. ಒಂದು ಕಡೆ ನಿಯತ್ರಣಕ್ಕೆ ಬರುತ್ತಿದ್ದಂತೆ ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಳ್ಳುತ್ತಿದೆ.
ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜಿಂಕೆಗಳು, ಕೋತಿಗಳು, ಹಾವು, ಕಾಡು ಹಂದಿ, ಮೊಲ, ನವಿಲು ಸೇರಿದಂತೆ ಪ್ರಾಣಿ ಪಕ್ಷಿಗಳು ವಾಸವಾಗಿದ್ದು, ತಪ್ಪಿಸಿಕೊಳ್ಳಲಾಗದೆ ಸುಟ್ಟು ಕರಕಲಾಗಿರುವ ಶಂಕೆ ಇದೆ.
ಅವಘಡದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಫಾರಿ ಬಂದ್ ಮಾಡಲಾಗಿದೆ. ಅಪಾರ ಪ್ರಮಾಣದಲ್ಲಿ ಹಸಿರು ನಾಶವಾಗಿದ್ದು, ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದಿರುವುದೇ ಈ ಘಟನೆಗೆ ಕಾರಣ ಎಂದು ಆರೋಪಿಸಲಾಗುತ್ತಿದೆ.