Latest

ಬಿಜೆಪಿ ಮಹಿಳಾ ದಿನಾಚರಣೆ: ಸಾಧಕರ ಸತ್ಕಾರ, ಚುನಾವಣೆ ಪ್ರಣಾಳಿಕೆ ಸಂವಾದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸಾಧಕರಿಗೆ ಸತ್ಕಾರ ಹಾಗೂ ಬರಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆ ಕುರಿತು ಸಂವಾದ ನಡೆಸುವ ಮೂಲಕ ಬೆಳಗಾವಿಯ ಬಿಜೆಪಿ ಮಹಿಳಾ ಮೋರ್ಚಾ ಅರ್ಥಪೂರ್ಣವಾಗಿ ಮಹಿಳಾ ದಿನ ಆಚರಿಸಿತು.

ಬಿಜೆಪಿ ವೈದ್ಯಕೀಯ ಕೋಶದ ಸಂಯೋಜಕಿ ಡಾ.ಸೋನಾಲಿ ಸರ್ನೋಬತ್ ಹಾಗೂ ಡಾ.ನೇತ್ರಾ ಸಬ್ನಿಸ್ ಸಂವಾದ ಕಾರ್ಯಕ್ರಮ ಸಂಯೋಜಿಸಿದರು.

ಪ್ರಧಾನಿ ನರೇಂದ್ರ ಮೋದಿ ಕಳೆದ ಅವಧಿಯಲ್ಲಿ ನಡೆಸಿದ ಆಡಳಿತ, ಬೇರೆ ಬೇರೆ ವರ್ಗದ ಜನರಿಗಾಗಿ ತಂದಿರುವ ಯೋಜನೆಗಳು ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಸರಕಾರ ನಿರ್ವಹಿಸಿದ ಪಾತ್ರದ ಕುರಿತು ಡಾ.ಸೋನಾಲಿ ಸರ್ನೋಬತ್ ವಿವರಿಸಿದರು.

ಕೇಂದ್ರ ಸರಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಕುರಿತು ಡಾ.ನೇತ್ರಾ ಸಬ್ನಿಸ್ ಮಾಹಿತಿ ನೀಡಿದರು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಉಜ್ವಲಾ ಬಡವಣಾಚೆ ಹಾಗೂ ಲೀನಾ ಟೋಪಣ್ಣವರ್, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಮಾಹಿತಿ ನೀಡಿ, ಮುಂದಿನ ಅವಧಿಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವ ದಿಸೆಯಲ್ಲಿ ವಹಿಸಬೇಕಾದ ಪಾತ್ರಗಳ ಕುರಿತು ವಿವರಿಸಿದರು.

ಲೋಕಸಭಾ ಸದಸ್ಯ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. 

ಬಿಜೆಪಿಯ ಬೆಳಗಾವಿ ಮಹಾನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಗುಡ್ಡಕಾಯು, ಉತ್ತರ ಕ್ಷೇತ್ರದ ಅಧ್ಯಕ್ಷೆ ಪ್ರಜ್ಞಾ ಶಿಂಧೆ, ದಕ್ಷಿಣ ಕ್ಷೇತ್ರದ ಅಧ್ಯಕ್ಷೆ ಸುವರ್ಣಾ ಪಾಟೀಲ ವೇದಿಕೆಯಲ್ಲಿದ್ದರು.

ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ತೇಜಸ್ ಹರ್ಷದ್ ಕಲಘಟಗಿ, ಊರ್ಮಿಲಾ ಖಂಡಗಾಳೆ, ಜಯಶ್ರೀ ಮಂಡ್ರೋಳಿ, ಶೈಲಾ ಮೆಹತಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸವಿತಾ ಹೆಬ್ಬಾರ ನಿರೂಪಿಸಿದರು. ನ್ಯಾಯವಾದಿಗಳು, ಬ್ಯಾಂಕ್ ಉದ್ಯೋಗಿಗಳು, ಶಿಕ್ಷಕಿಯರು, ವೈದ್ಯರು ಸಂವಾದದಲ್ಲಿ ಪಾಲ್ಗೊಂಡು ಹಲವಾರು ಸಲಹೆ, ಸೂಚನೆ ನೀಡಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button