ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಾಂತಾಯಿ ವೃದ್ಧಾಶ್ರಮ ಅತ್ಯಂತ ವ್ಯವಸ್ಥಿತವಾಗಿ ನಡೆಸಲ್ಪಡುತ್ತಿದ್ದು, ಇಲ್ಲಿನ ವ್ಯವಸ್ಥೆ ಇಲ್ಲಿ ಆಶ್ರಯ ಪಡೆದವರಿಗೆ ಮನೆಯ ವಾತಾವರಣ ಕಲ್ಪಿಸಿದೆ. ನನಗೂ ಇಲ್ಲಿ ಬಂದು ಸೇವೆ ಮಾಡಬೇಕೆಂದು ಅನಿಸುತ್ತದೆ ಎಂದು ಬೆಳಗಾವಿಯ ಕ್ಯಾಂಟೋನ್ಮೆಂಟ್ ಸಿಇಓ ದಿವ್ಯಾ ಶಿವರಾಮ ಹೇಳಿದ್ದಾರೆ.
ನಗರ ಹೊರವಲಯದ ಬಾಮನವಾಡಿಯಲ್ಲಿ ಜೈನ್ ಎಂಜಿನೀಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ ಶಾಂತಾಯಿ ವೃದ್ದಾಶ್ರಮದ ೨೦ ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಲ್ಲಿರುವ ಎಲ್ಲ ವೃದ್ಧರು ಆರೋಗ್ಯದಿಂದ ಮಾತ್ರವಲ್ಲ ಎಲ್ಲ ರೀತಿಯಲ್ಲಿ ಸಮರ್ಥರಾಗಿದ್ದಾರೆ. ಖುಷಿಯಿಂದಿದ್ದಾರೆ. ಹಿರಿಯರ ಸೇವೆ ಮಾಡುವುದು ಒಂದು ಭಾಗ್ಯ ಎಂದು ಅವರು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟ್ಕರ್ ಮಾತನಾಡಿ, ಇದು ವೃದ್ದಾಶ್ರಮ ಅಲ್ಲ. ಇಲ್ಲಿ ವೃದ್ಧರಿಗೆ ಕಲ್ಪಸಿರುವ ವ್ಯವಸ್ಥೆ, ಆರೋಗ್ಯ ಕಾಳಜಿ ನೋಡಿದರೆ ಒಂದು ರೀತಿಯಲ್ಲಿ ರೇಸಾರ್ಟ ಎಂದೇ ಅನಿಸುತ್ತದೆ ಎಂದರು.
ಸಮಾರಂಭ ಉದ್ಘಾಟಿಸಿದ ಜಿಪಂ ಸಿಇಓ ಆರ್. ರಾಮಚಂದ್ರನ್, ನಾನು ದೇಶದ ವಿವಿಧ ಭಾಗಗಳಲ್ಲಿನ ಸಮಾಜ ಸೇವಾ ಸಂಸ್ಥೆಗಳನ್ನು ನೋಡಿದ್ದೇನೆ. ಆದರೆ ಶಾಂತಾಯಿ ವೃದ್ಧಾಶ್ರಮನಂತಹ ಸಂಸ್ಥೆಯನ್ನು ಎಲ್ಲಿಯೂ ನೋಡಿಲ್ಲ. ಇಲ್ಲಿರುವ ವೈದ್ಯಕೀಯ ತಪಾಸಣೆ ವ್ಯವಸ್ಥೆ, ವೃದ್ದರ ಬಗ್ಗೆ ತೋರಿಸುವ ಕಾಳಜಿ ನಿಜಕ್ಕೂ ಶ್ಲಾಘನೀಯ. ನಿಜಕ್ಕೂ ಇದು ದೇವರ ಸೇವೆಗೆ ಸಮಾನವಾದುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿಂಡಲಗಾ ಜೈಲಿನ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಮಾತನಾಡಿ, ಪಾಟೀಲ ಬಂಧುಗಳು ಮತ್ತು ಮಾಜಿ ಮಹಾಪೌರ ವಿಜಯ ಮೋರೆ ಅವರು ವೃದ್ದಾಶ್ರಮ ಆರಂಭಿಸುವ ಮೂಲಕ ಒಳ್ಳೆಯ ಸಮಾಜ ಸೇವೆ ಮಾಡುತ್ತಿದ್ದಾರೆ. ತಾವು ಸಂಸ್ಥೆಗೆ ಕೈಲಾದಷ್ಟು ಸಹಾಯ ಮಾಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕೊಲ್ಲಾಪುರದ ಸಮಾಜ ಸೇವಕಿ ಗೌರಿ ಕಿಶೋರ ದೇಶಪಾಂಡೆ, ಡಾ. ಘನಶ್ಯಾಂ ವೈದ್ಯ, ದತ್ತಾ ಘೋರ್ಪಡೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.
ಜೈನ್ ಎಂಜಿನೀಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ರೋಹಿತ ರಾಜ್ ಸ್ವಾಗತಿಸಿದರು. ಮಾಜಿ ಮಹಾಪೌರ ವಿಜಯ ಮೋರೆ ವಂದಿಸಿದರು. ಎಂಬಿಎ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ