Latest

ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ಚುನಾವಣಾ ವೀಕ್ಷಕರ ಭೇಟಿ

ಸುದ್ದಿ, ಜಾಹೀರಾತು ಮೇಲೆ ನಿಗಾ ವಹಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಚಂದ್ರ ದುಬೆ ಮಂಗಳವಾರ (ಏ.೯) ವಾರ್ತಾ ಇಲಾಖೆಯ ವಾರ್ತಾಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಮಪತ್ರ ಹಿಂತೆಗೆದುಕೊಂಡ ಬಳಿಕ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಚುನಾವಣಾ ಪ್ರಚಾರ ಮತ್ತು ಜಾಹೀರಾತು ಮೊರೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದರು.
ಚುನಾವಣಾ ಜಾಹೀರಾತುಗಳ ಲೆಕ್ಕ ನಿರ್ವಹಣೆ ಕುರಿತ ರಿಜಿಸ್ಟರ್ ಗಳನ್ನು ಅವರು ಪರಿಶೀಲಿಸಿದರು. ಪತ್ರಿಕೆ, ಟಿವಿ, ರೇಡಿಯೋ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತುಗಳ ಮೇಲೂ ಹೆಚ್ಚಿನ ನಿಗಾ ವಹಿಸುವಂತೆ ಅವರು ತಿಳಿಸಿದರು.
ಮಾಧ್ಯಮ ಕಣ್ಗಾವಲು ಕೇಂದ್ರದಲ್ಲಿ ಕನ್ನಡ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಯ ಎಲ್ಲ ದಿನಪತ್ರಿಕೆಗಳು, ಸ್ಥಳೀಯ ದಿನಪತ್ರಿಕೆಗಳು ಮತ್ತು ಎಲ್ಲ ಪ್ರಮುಖ ಕನ್ನಡ ಟಿವಿ ಚಾನೆಲ್ ಗಳನ್ನು ಪರಿಶೀಲಿಸಲಾಗುತ್ತಿದ್ದು, ಚುನಾವಣಾ ಜಾಹೀರಾತು ಅಥವಾ ಪೇಡ್ ನ್ಯೂಸ್ ಕಂಡುಬಂದರೆ ಅದರ ವೆಚ್ಚವನ್ನು ಅಭ್ಯರ್ಥಿಗಳ ಅಥವಾ ಪಕ್ಷದ ವೆಚ್ಚಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ ವಿವರಿಸಿದರು.
ಮಾಧ್ಯಮ ಕಣ್ಗಾವಲು ಕೇಂದ್ರದ ಮೇಲ್ವಿಚಾರಕ ಸೋಮಶೇಖರ್, ವಿನಾಯಕ ವಣ್ಣೂರ, ಝಡ್.ಜಿ. ಸಯ್ಯದ್, ಶಿರಿಷ್ ಜೋಶಿ, ವಜ್ರಾ ಪಾಟೀಲ್, ಎಂ.ಜಿ. ಪತ್ತಾರ, ಐ.ಡಿ. ಹಿರೇಮಠ, ಅನಂತ ಪಪ್ಪು, ಎಂ.ಎಲ್. ಜಮಾದಾರ, ಮಲ್ಲಿಕಾರ್ಜುನ ಹೆಗ್ಗಾನಾಯಕ, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button