Latest

ಮುಕ್ತಿಮಠದಲ್ಲಿ 14 ರಿಂದ ಜಾತ್ರಾಮಹೋತ್ಸವ

 

     ಬೆಳಗಾವಿಯ ನಗರದ ಸಮೀಪದಲ್ಲಿರುವ, ರಾಷ್ಟ್ರೀಯ ಹೆದ್ದಾರಿ 4ರ ಬದಿಯ ಭೂತರಾಮನಟ್ಟಿಯ ಮುಕ್ತಿಮಠದ ಮಕರ ಸಂಕ್ರಮಣ ಜಾತ್ರಾ ಮಹೋತ್ಸವವು ಇದೇ ಜನೇವರಿ 14 ರಂದು ಅದ್ದೂರಿಯಾಗಿ ಆರಂಭವಾಗಲಿದ್ದು 18 ರಂದು ಮುಕ್ತಾಯವಾಗಲಿದೆ. ಈ ಜಾತ್ರೆಯ ನಿಮಿತ್ಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಆ ನಿಮಿತ್ಯ ಆ ಕ್ಷೇತ್ರವನ್ನು ಪರಿಚಯಿಸುವ ಲೇಖನ ಇದು.

 

 

  ಸುಕ್ಷೇತ್ರ ಮುಕ್ತಿಮಠದ ಪೀಠಾಧಿಪತಿ ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ೨೦೧೯ ರ ಜನೇವರಿ ೧೪ ರಿಂದ ೧೮ ರ ವರೆಗೆ ಮಕರ ಸಂಕ್ರಮಣದಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗುತ್ತಲಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಇದು ಮಾನವಜನ್ಮದ ಸಂಕುಲ ಶಿವಭಕ್ತರಿಗೆ ಒಂದೇ ಕುಲ ಎನ್ನುವ ಮಹಾನ ಸಂದೇಶ ನೀಡುವ ನಿಟ್ಟಿನಲ್ಲಿ ಶ್ರೀ ಮುಕ್ತಾಂಬಿಕಾ ಅಮ್ಮನವರ ಸನ್ನಿಧಿ ಶ್ರೀ ಕ್ಷೇತ್ರ ಮುಕ್ತಿಮಠದ ಪಂಚಗ್ರಾಮ ಭೂಕೈಲಾಸದ ಪುಣ್ಯಸ್ಥಳದಲ್ಲಿ ಈ ಸಲವೂ ಪ್ರತಿವರ್ಷದ ಪರಂಪರೆ ಪದ್ಧತಿಯಂತೆ ಅದ್ದೂರಿಯಾಗಿ ಜರುಗುತ್ತಲಿದೆ.
ಬೆಳಗಾವಿ ತಾಲೂಕಿನ ಮುಕ್ತಿಮಠವು ಉತ್ತರಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ನಾಡಿನ ನಾನಾ ಮೂಲೆಗಳಿಂದ ಭಕ್ತರನ್ನು ಹೊಂದಿದೆ. ಶ್ರದ್ಧೆ ಭಕ್ತಿಯಿಂದ ಶ್ರೀಮಠವನ್ನು ಆರಾಧಿಸಿದವರನ್ನು ಹರಿಸಿದೆ, ಹಾರೈಸಿದೆ, ಅವರ ಬದುಕು ಪಾವನ ಮಾಡಿದೆ. ನಂಬಿದ ಭಕ್ತರು ಶ್ರೀ ಮಠದ ಕೃಪೆಗೆ ಪಾತ್ರರಾಗಿ ತನ್ನ ಬದುಕಿನಲ್ಲಿ ಹಲವು ಬದಲಾವಣೆಗೆ ಶ್ರೀ ಮಠವು ಸಹಕಾರಿಯಾಗಿದೆ.
ಮುಕ್ತಿಮಠದ ಶಕ್ತಿ ಸ್ಥಳದಲ್ಲಿ ಮುಕಾಂಬಿಕೆ ದೇವಾಲಯ, ಜಗದ್ಗುರು ಪಂಚಾಚಾರ್ಯರ ಲಿಂಗೋದ್ಭವ ಮೂರ್ತಿಗಳು, ಭೂಕೈಲಾಸ ಮಂದಿರ, ನಂದಿ ಜೊತೆಗೆ ಸಧ್ಯ ನಿರ್ಮಾಣವಾಗಿರುವಕಲ್ಯಾಣ ಮಂಟಪವೂ ಸೇರಿದಂತೆ ಹಲವು ದೇವಾಲಯಗಳ ಕಟ್ಟಡಗಳು ಆಕರ್ಷಣಿಯವಾಗಿ ನಿರ್ಮಾಣವಾಗಿವೆ. ಭಕ್ತರ ಉದ್ಧಾರವೇ ಮಠದ ಪ್ರಥಮ ಆದ್ಯತೆಯಾಗಿದೆ. ಮುಕ್ತಿಮಠದಲ್ಲಿ ಸಿದ್ದಿವಿನಾಯಕ ಮಂದಿರ ನಿರ್ಮಾಣವಾಗಿದೆ, ಹಿಡಕಲ್‌ಜಲಾಶಯದಲ್ಲಿ ಮುಳುಗಿದ್ದ ಜೋಡಿ ಲಿಂಗಗಳನ್ನು ತೆಗೆದುಕೊಂಡು ಬಂದು ಶ್ರೀ ಮಠದಲ್ಲಿ ಪ್ರತಿಷ್ಠಾಪಿಸಿ ದಿನವೂ ಬಿಲ್ವಾರ್ಚನೆಯಿಂದ ಪೂಜಿಸುವ ವ್ಯವಸ್ಥೆಯನ್ನು ಶ್ರೀಗಳು ಮಾಡಿರುವರು. ದೇಶದ ಪ್ರಮುಖ ನಾಲ್ಕು ಶಕ್ತಿ ದೇವತೆಗಳಾದ ಮಧುರೆಯ ಮೀನಾಕ್ಷಿ, ಕಂಚಿಯ ಕಾಮಾಕ್ಷಿ, ಕನ್ಯಾಕುಮಾರಿಯ ಜಲಜಾಕ್ಷಿ, ಕಾಶಿಯ ವಿಶಾಲಾಕ್ಷಿ ದೇವಾಲಯಗಳ ರೀತಿಯಲ್ಲಿ ಮುಕ್ತಿಮಠದಲ್ಲಿ ಮುಕ್ತಾಂಬಿಕಾ ದೇವಿಯ ಮಹಾಮಂದಿರವನ್ನು ನಿರ್ಮಿಸಿ ಅಮ್ಮನವರ ನಿತ್ಯಕುಂಕುಮಾರ್ಚನೆಯಂತಹ ಸರ್ವ ಪೂಜೆಯ ವ್ಯವಸ್ಥೆ ಮಾಡಲಾಗಿದೆ. ೧೨ ದ್ವಾದಶ ಜ್ಯೋತಿರ್ಲಿಂಗಗಳ ಮಹಾಮಂದಿರ ನಿರ್ಮಿಸಿ ಇಲ್ಲಿಯೇ ಶಿವನನ್ನು ನೆಲೆಗೊಳಿಸಿದ್ದಾರೆ. ಶಿವನೊಂದಿಗೆ ಅಮ್ಮ ಪಾರ್ವತಿಯನ್ನು ಪ್ರತಿಷ್ಠಾಪಿಸಲು ಶ್ರೀಗಳು ಶಿವಪಾರ್ವತಿಯರ ಕೈಲಾಸ ಮಹಾಮಂದಿರವನ್ನು ನಿರ್ಮಿಸಿ ಹಬ್ಬ ಹರಿದಿನಗಳಲ್ಲಿ ಕಲ್ಯಾಣೋತ್ಸವದಂತಹಕಾರ್ಯಕ್ರಮ ಜರುಗಲುಕಾರಣರಾಗಿದ್ದಾರೆ. ಲಿಂಗವಂತ ಜನಾಂಗದ ಉದ್ಧಾರಕರಾಗಿರುವ ಶ್ರೀ ಜಗದ್ಗುರು ಮೂಲ ಪಂಚಾಚಾರ್ಯರ ಮಹಾಮಂದಿರ ಸ್ಥಾಪಿಸಿ ಕೇದಾರ, ಉಜ್ಜಯನಿ, ಶ್ರೀಮದ್ ರಂಭಾಪುರಿ, ಶ್ರೀ ಜ್ಞಾನಕ್ಷೇತ್ರ ಕಾಶಿಯ ಜಗದ್ಗುರುಗಳನ್ನು ನಿರಂತರವಾಗಿ ಮೇಲಿಂದ ಮೇಲೆ ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆಯಿಸಿ ಸಕಲರನ್ನು ಪುನೀತರನ್ನಾಗಿ ಮಾಡುತ್ತಿರುವರು. ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅನುಷ್ಠಾನಗೈದ ಸ್ಥಳದಲ್ಲಿ ಅನುಷ್ಠಾನ ಮಂದಿರ ನಿರ್ಮಾಣವಾಗಿದೆ. ಪ್ರತಿನಿತ್ಯ ಸದ್ ಭಕ್ತರಿಗಾಗಿ ಅನ್ನದಾಸೋಹ ಮಂದಿರ ನಿರ್ಮಿಸಲಾಗಿದೆ. ಶಾಂತಿ ನೆಮ್ಮದಿ ಅರಸಿಬರುವ ಭಕ್ತರಿಗೆ ತಂಗುದಾಣ ಹಾಗೂ ಯಾತ್ರಾ ನಿವಾಸಗಳನ್ನು ನಿರ್ಮಿಸಲಾಗಿದೆ. ಬೃಹತ್‌ ಕಲ್ಯಾಣ ಮಂಟಪ ನಿರ್ಮಾಣಗೊಂಡು ಮದುವೆಗಳು ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಆಯೋಜಿಸಲು ಸಹಾಯಕವಾಗಿವೆ.
ಮುಕ್ತಿಮಠಕ್ಕೆ ಆಗಮಿಸುವ ಜನರಿಗೆ ನಿತ್ಯ ಅನ್ನದಾಸೋಹವಿದೆ. ಭಕ್ತರಿಗೆ ತಂಗಲು ವಿಶ್ರಾಂತಿ ಕೊಠಡಿಗಳಿವೆ. ಬಡ ಮಕ್ಕಳಿಗೆ ಉಚಿತವಾದ ಶಿಕ್ಷಣ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯ ಸಹಸ್ರಾರು ಭಕ್ತರು ಶ್ರೀ ಮಠಕ್ಕೆ ಆಗಮಿಸಿ ಭಾಗ್ಯ ಮಾತೆ ಮುಕ್ತಾಂಬಿಕೆಯದರ್ಶನ ಭಾಗ್ಯ ಪಡೆದುಕೊಳ್ಳುವರು. ತನ್ಮೂಲಕ ತಮ್ಮ ಜೀವನವನ್ನು ಪುಣ್ಯಮಯ ಪಾವನ ಮಾಡಿಕೊಳ್ಳುವರು. ಶ್ರೀ ಮಠದ ಆವರಣದಲ್ಲಿ ಭಕ್ತರಿಗಾಗಿ ಗ್ರಂಥಾಲಯ ಸೇವೆ ಇದೆ. ಜ್ಞಾನ ಒದಗಿಸಲು ಸಾವಿರಾರು ಗ್ರಂಥಗಳು ಲಭ್ಯವಿದೆ. ಶ್ರೀಮಠದ ಆವರಣವು ಪ್ರಶಾಂತ ನಿಲಯವಾಗಿದೆ. ಪ್ರತಿವರ್ಷಜಾತ್ರಾ ಮಹೋತ್ಸವ ಮಕರ ಸಂಕ್ರಮಣದಲ್ಲಿಐದು ದಿನಗಳ ಕಾಲ ಜರುಗುತ್ತಿದ್ದು, ವಿಶೇಷ ಜಾತ್ರಾ ಮಹೋತ್ಸವ ಜರುಗುತ್ತಿವೆ.

-ಬಸವರಾಜ ಫ. ಸುಣಗಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button