ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿ ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಇಂದು ಶಾಸಕ ಅನಿಲ ಬೆನಕೆ ಕರ್ನಾಟಕ ಜಲ ಮಂಡಳಿ ಅಧಿಕಾರಿಗಳೊಂದಿಗೆ ರಾಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.
ರಾಕಸಕೊಪ್ಪ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಆಗುತ್ತಿದ್ದು ಇದರ ಸಾಮರ್ಥ್ಯ 8 ಟಿ.ಎಮ್.ಸಿ ಇದೆ. ಸಧ್ಯಕ್ಕೆ ಬೆಳಗಾವಿ ನಗರಕ್ಕೆ ದಿನವೊಂದಕ್ಕೆ ೧೨ ಎಮ್.ಜಿ.ಡಿ ನೀರು ಪೂರೈಕೆ ಆಗುತ್ತಿದೆ ಹಾಗೂ ಇಂದಿನ ಮೌಲ್ಯ ಮಾಪನದ ಪ್ರಕಾರ ೦.೦೭ ಟಿ.ಎಮ್.ಸಿ ನೀರು ಜಲಾಶಯದಲ್ಲಿದೆ ಎಂದು ತಿಳಿಸಿದರು.
ಜಲಾಶಯದಲ್ಲಿ ಈಗಿರುವ ನೀರನ್ನು ಜೂನ್ ೧೦ ರವರೆಗೆ ಬೆಳಗಾವಿ ನಗರಕ್ಕೆ ಪೂರೈಸಬಹುದಾಗಿದೆ. ಆದ್ದರಿಂದ ಬೆಳಗಾವಿಯ ಎಲ್ಲ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು ಹಾಗೂ ನೀರು ಪೋಲಾಗದಂತೆ ಜಾಗೃತೆಯನ್ನು ವಹಿಸಿಕೊಳ್ಳಬೇಕು ಎಂದು ಶಾಸಕ ಅನಿಲ ಬೆನಕೆ ಜನರಲ್ಲಿ ವಿನಂತಿಸಿದರು.
ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ನೀರು ಪೋಲಾಗದಂತೆ ನಗರದಲ್ಲಿ ಪೈಪಲೈನ್ಗಳನ್ನು ರಿಪೇರಿ ಮಾಡಿ ವ್ಯವಸ್ಥಿತವಾಗಿ ಇಡಬೇಕು ಎಂದು ಸೂಚಿಸಿದರು ಹಾಗೂ ನೀರಿನ ಅಭಾವ ಬಾರದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು, ಈ ತಿಂಗಳಿನಲ್ಲಿ ಉತ್ತಮ ಮಳೆಯಾದರೆ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಲಮಂಡಳಿ ಸಹಾಯಕ ಇಂಜಿನೀಯರ್ ಮಲ್ಲಿಕಾರ್ಜುನ ರಾಚುನಾಯ್ಕರ ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಲ ಮಂಡಳಿ ಇತರ ಸಿಬ್ಬಂದಿ, ಮುಖಂಡರಾದ ಮಹಾಲಿಂಗಪ್ಪ ತಂಗಡಗಿ, ರಾಹುಲ ಮುಚ್ಚಂಡಿ, ನಾಗೇಶ ಲಂಗರಖಂಡೆ, ವಿಪುಲ ಜಾಧವ, ಶಾಸಕರ ಆಪ್ತ ಸಹಾಯಕರಾದ ವಿ.ಎಮ್. ಪತ್ತಾರ, ಶಂಕರ ಪಾಟೀಲ, ಮನೊಹರ ಮುತಗೇಕರ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ