Latest

ರಾಮಮಂದಿರ ಕಟ್ಟಲು ಯಾರು ವಿರೋಧ ಮಾಡಿದ್ದರು? ನಿಮ್ಮ ಕೈಗಳನ್ನು ಯಾರು ಕಟ್ಟಿದ್ದರು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರಾಜ್ಯ ಕಾಂಗ್ರೆಸ್ ಪ್ರಚಾರ ಸಮೀತಿಯ ಅಧ್ಯಕ್ಷ ಹೆಚ್ ಕೆ ಪಾಟೀಲ ಇಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಸವದತ್ತಿ ತಾಲ್ಲೂಕಿನ ಹೂಲಿ, ಸವದತ್ತಿ, ಯರಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಟೀಕಿಸಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

Related Articles


ಕಾಂಗ್ರೆಸ್ ಅಭ್ಯರ್ಥಿ ಡಾ.ವ್ಹಿ. ಎಸ್. ಸಾಧುನವರ, ಸವದತ್ತಿಯ ಕಾಂಗ್ರೆಸ್ ನಾಯಕರಾದ ವಿಶ್ವಾಸ ವೈದ್ಯ, ಪಂಚನಗೌಡ್ರ ದ್ಯಾಮನಗೌಡ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಮತನಾಡಿದ ಹೆಚ್ ಕೆ ಪಾಟೀಲ, ಬಿಜೆಪಿ ನಾಯಕರು ಸಂವಿಧಾನದ ಉಲ್ಲಂಘನೆ ಮಾಡುವುದರ ಜೊತೆಗೆ ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯೋಗಿ ಆಧಿತ್ಯನಾಥ ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಕರೆದು ದೇಶದ ಮಿಲಿಟರಿಯನ್ನು ರಾಜಕೀಕರಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ, ರಾಜ್ಯಪಾಲ ಕಲ್ಯಾಣ ಸಿಂಗ್ ನಾನು ಬಿಜೆಪಿ ಕಾರ್ಯಕರ್ತ,ಬಿಜೆಪಿಗೆ ಓಟು ಹಾಕಿ ಎಂದು ಹೇಳುವ ಮೂಲಕ ಸಂವಿಧಾನಾತ್ಮಕ ಹುದ್ದೆಗೆ ಅಗೌರವ ತೋರುವುದರ ಜೊತೆಗೆ ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ ಎಂದು ಹೆಚ್ ಕೆ ಪಾಟೀಲ ವಾಗ್ದಾಳಿ ನಡೆಸಿದರು.


ನೀತಿ ಆಯೋಗದ ಉಪಾಧ್ಯಕ್ಷ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಟೀಕೆ, ವಿಮರ್ಶೆ ಮಾಡಿ ನೀತಿ ಆಯೋಗ ಸಹಿತ ರಾಜಕಾರಣದಲ್ಲಿ ತೊಡಗಿದೆ. ಬಿಜೆಪಿ ಸಂವಿಧಾನವನ್ನು ದುರುಪಯೋಗ ಮಾಡಿಕೊಂಡು ದೇಶದಲ್ಲಿ ಅರಾಜಕತೆಯನ್ನು ಸೃಷ್ಠಿ ಮಾಡುತ್ತಿದೆ ಎಂದು ಹೆಚ್ ಕೆ ಪಾಟೀಲ ಆರೋಪಿಸಿದರು.
ಪ್ರಧಾನಿ ಮೋದಿ ಅವರು ಮಿಲಿಟರಿ ಡ್ರೆಸ್ ಹಾಕಿಕೊಂಡು, ಗಾಗಲ್ ಹಾಕಿಕೊಂಡು ದೇಶದ ಯುವಕರನ್ನು ಆಕರ್ಷಿಸುವ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದರು. ರಾಮಮಂದಿರ ಕಟ್ಟಲು ಯಾರು ವಿರೋಧ ಮಾಡಿದ್ದರು? ನಿಮ್ಮ ಕೈಗಳನ್ನು ಯಾರು ಕಟ್ಟಿದ್ದರು? ಐದು ವರ್ಷ ತಮಗೆ ಬೇಕಾದ್ದನ್ನು ಮಾಡಿದ್ದೀರಾ? ಗ್ರಾಮದ ಜನ ತಮ್ಮ ತಮ್ಮ ಊರುಗಳಲ್ಲಿ ಎರಡೆರಡೂ ಮಂದಿರಗಳನ್ನು ಕಟ್ಟಿಸಿಕೊಂಡರು. ಈ ಬಿಜೆಪಿ ನಾಯಕರಿಗೆ ಒಂದು ರಾಮ ಮಂದಿರ ಕಟ್ಟಲು ಸಾಧ್ಯವಾಗಲಿಲ್ಲ ಎಂದು ಹೆಚ್ ಕೆ ಪಾಟೀಲ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಮಾತನಾಡಿ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ತಮ್ಮ ಸೇವೆಗೆ ಒಂದು ಅವಕಾಶ ಕೊಡಿ. ಇಪ್ಪತ್ತೈದು ವರ್ಷದ ಅಭಿವೃದ್ಧಿಯನ್ನು ಕೇವಲ ಐದು ವರ್ಷದಲ್ಲಿ ಮಡಿ ತೋರಿಸುತ್ತೇನೆ. ಸುಳ್ಳು ಹೇಳುವುದೇ ಬಿಜೆಪಿ ಅಜೇಂಡಾ, ಬಿಜೆಪಿ ನಾಯಕರ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಸಾಧುನವರ ಮತದಾರರಲ್ಲಿ ಮನವಿ ಮಾಡಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button