ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಕ್ಕಳಿಗೆ ವಿದ್ಯೆ ಕಲಿಸುವದರೊಂದಿಗೆ ಶಿಕ್ಷಕರು ಮತ್ತು ಪಾಲಕರು ಸಂಸ್ಕಾರವನ್ನು ಕೂಡಾ ಕಲಿಸಬೇಕು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿನಗಿ ಅವರು ಹೇಳಿದರು.
ಬೆಳಗಾವಿ ಕೇಂದ್ರೀಯ ವಿದ್ಯಾಲಯ ಸಂಖ್ಯೆ ೩ರ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ನಮ್ಮ ದೇಶದ ಭವಿಷ್ಯದ ಸಂಪತ್ತು ಹಾಗಾಗಿ ಶಿಕ್ಷಕರು ಆಸಕ್ತಿವಹಿಸುವದಷ್ಟೇ ಅಲ್ಲದೆ ಶ್ರದ್ಧೆಯಿಂದ ಕಲಿಸಬೇಕು ಎಂದು ಹೇಳಿದರು.
ನನ್ನ ಪಕ್ಕದ ಜಿಲ್ಲೆಗಳಲ್ಲಿ ಮೂರು ಕೇಂದ್ರಿಯ ವಿದ್ಯಾಲಯಗಳು ಇರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ. ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ಮಕ್ಕಳಿಗೆ ಉಜ್ವಲವಾದ ಭವಿಷ್ಯವಿದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಸದ ಸುರೇಶ ಅಂಗಡಿ ಅವರು ಮಾತನಾಡಿ ಮಚ್ಚೆಯಂತಹ ಹಿಂದುಳಿದ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಾರಂಭವಾಗಿದ್ದು ಇಲ್ಲಿರುವ ಬಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕಲಿಯಲು ತುಂಬಾ ಸಹಕಾರಿಯಾಗಿದೆ. ಉಳ್ಳವವರಿಗೆ ಎಲ್ಲಿಯಾದರೂ ಶಿಕ್ಷಣ ದೊರಯುತ್ತದೆ. ಆದರೆ ಬಡಮಕ್ಕಳಿಗೆ ಅಷ್ಟು ಸುಲಭವಾಗಿ ಶಿಕ್ಷಣ ದೊರೆಯುವದಿಲ್ಲ. ಇಂತಹ ಶಾಲೆಗಳಲ್ಲಿ ಅವಕಾಶ ದೊರೆತರೆ ಅವರು ಉನ್ನತವಾದ ಸ್ಥಾನಮಾನವನ್ನೂ ಪಡೆಯಲು ಸಹಾಯಕವಾಗುತ್ತದೆ. ಶಿಕ್ಷಣವನ್ನು ಕೇವಲ ಪ್ರಮಾಣ ಪತ್ರ ಪಡೆಯಲು ಕಲಿಯದೇ ಉತ್ತಮ ಜ್ಞಾನವನ್ನು ಪಡೆದುಕೊಳ್ಳಲು ಶಿಕ್ಷಣ ಕೇಂದ್ರಕ್ಕೆ ಹೋಗಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕೆಂದು ಹೇಳಿದರು.
ದೇಶದ ಅತ್ಯುತ್ತಮ ಕೇಂದ್ರೀಯ ವಿದ್ಯಾಲಯಗಳಲ್ಲಿ ಬೆಳಗಾವಿ ಕೇಂದ್ರಿಯ ವಿದ್ಯಾಲಯ ಕೂಡಾ ಒಂದಾಗಬೇಕೆಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ, ವಿದ್ಯಾಲಯ ನಿರ್ವಹಣಾ ಸಮಿತಿ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಾದ ಡಾ. ಎಸ್ ಬಿ ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಬೆಂಗಳೂರು ಡಿ.ಟಿ. ಎಸ್ ಉಪ ಆಯುಕ್ತರಾದ ಡಿ.ಟಿ.ಎಸ್ ರಾವ್, ಬೆಂಗಳೂರು ಕೆ.ಎಸ್.ನ ಸಹಾಯಕ ಆಯುಕ್ತರಾದ ಡಾ. ಎನ್ ವಸಂತ, ಬೆಳಗಾವಿ ಕೇಂದ್ರೀಯ ವಿದ್ಯಾಲಯ ಸಂ.೩ರ ಪ್ರಾಚಾರ್ಯರಾದ ಶಶಿ ಇ.ಕೆ, ಧಾರವಾಡ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲರಾದ ಮುರುಳಿಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಒಂದೇ ಮಾತರಂ ಗೀತೆ ಹಾಗೂ ನಾಡಗೀತೆಯನ್ನು ಹಾಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ