ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ದೇಶಕ್ಕಾಗಿ ನಾನು ಏನು ಕೊಡುಗೆ ನೀಡಿದ್ದೇನೆ ಎಂದು ಪ್ರಶ್ನಿಸಿಕೊಳ್ಳಬೇಕೆ ವಿನಃ ದೇಶ ನಮಗೇನು ಮಾಡಿದೆ ಎಂದು ಕೇಳಬೇಡಿ. ಮಾತು ಕಡಿಮೆ ಕೆಲಸ ಹೆಚ್ಚಾಗಬೇಕು. ಮುಂದಿನ ಪೀಳಿಗೆ ನಮ್ಮ ಸೇವೆಯನ್ನು ಅನುಕರಿಸುಂತೆ ನಾವು ಮಾದರಿಯಾಗಿ ಜೀವನ ನಡೆಸಬೇಕು ಎಂದು ಜೆ ಎಲ್ ವಿಂಗ್ ಮೇ. ಅಲೋಕ ಕಕ್ಕರ ಹೇಳಿದರು.
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರದ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದ ಅವರು, ಯೋಧರು ಮತ್ತು ಸಮವಸ್ತ್ರಧಾರಿಗಳು ವಿಶ್ವದಲ್ಲಿಯೇ ಅತ್ಯಂತ ಸಮಗ್ರವಾದ, ವಿಶೇಷತೆಯನ್ನುಳ್ಳ ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರುವ ಸಂವಿಧಾನ ನಮ್ಮದು. ಇನ್ನೂ ಕೂಡ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಬೇಕಾಗಿದೆ. ಅದಕ್ಕೆ ತಕ್ಕಂತೆ ಆರೋಗ್ಯ ಸೇವೆಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮೀಣ ಭಾರತದಲ್ಲಿ ವೈದ್ಯಕೀಯ ಸೇವೆ ಲಭಿಸಿ, ರೋಗ ಬರುವುದಕ್ಕಿಂತ ಮುಂಚೆ ಅದನ್ನು ತಡೆಗಟ್ಟುವ ವಿಧಾನವನ್ನು ತಿಳಿಸಿಕೊಡಬೇಕು. ಶಿಕ್ಷಣ, ಆಪ್ತಸಮಾಲೋಚನೆ ಮೂಲಕ ಅವರಿಗೆ ಆರೋಗ್ಯದ ಕುರಿತು ಅರಿವು ಮೂಡಿಸಿ, ಕಡಿಮೆ ಔಷಧಿಗಳ ಮೂಲಕ ಒಳ್ಳೆಯ ಚಿಕಿತ್ಸೆ ನೀಡಿ ಎಂದು ಕರೆ ನೀಡಿದರು.
ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾವೋಜಿ ಮಾತನಾಡಿ, ಸಂಸ್ಥೆಯ ಅಭಿವೃದ್ದಿಗಾಗಿ ಸಕಲರೂ ತನು ಮನದಿಂದ ಶ್ರಮಿಸಬೇಕು. ನಿಜವಾದ ಆಸ್ತಿ ಯುವ ಪ್ರತಿಭೆ. ನಿಸ್ವಾರ್ಥ ಸೇವೆಯಿಂದ ಸಂಸ್ಥೆಯನ್ನು ವಿಶ್ವದಲ್ಲಿಯೇ ಸಮರ್ಥ ಸಂಸ್ಥೆಯಾಗಿ ಪರಿವರ್ತಿಸಲು ಸಾಧ್ಯ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ವಿ. ಜಾಲಿ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಆಸ್ಪತ್ರೆ ಪ್ರಕಟಿಸುವ ಲೈಫ್ ಲೈನ್ ಅನ್ನು ಅಲೋಕ ಕಕ್ಕರ, ಮಧುಮೇಹ ವೈದ್ಯ ಡಾ. ವಿವೇಕ ಸಾವೋಜಿ ಹಾಗೂ ಫೊಕಸ್ ಪುಸ್ತಕವನ್ನು ಡಾ. ವಿ .ಡಿ. ಪಾಟೀಲ ಬಿಡುಗಡೆ ಮಾಡಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯ ಡಾ. ಎನ್ ಎಸ್. ಮಹಾಂತಶೆಟ್ಟಿ, ಮೋನಿಕಾ ಕಕ್ಕರ, ಡಾ. ಶ್ರೀಧರ ಗಗಾನೆ, ಡಾ. ಸಂತೋಷ ಕುರಬೆಟ, ರವಿ ಸಂಕೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ