Latest

ಶಾಸ್ತ್ರಸಾಹಿತ್ಯ ದಾಸ ಸಾಹಿತ್ಯ ಎರಡೂ ಒಂದೆ -ಪೇಜಾವರ ಶ್ರೀ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 

ಸೂರ‍್ಯನ ಕಿರಣ ಹಾಗೂ ಚಂದ್ರನ ಕಿರಣ ಎರಡೂ ಒಂದೇ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅದರಂತೆ ಶಾಸ್ತ್ರಸಾಹಿತ್ಯ ಹಾಗೂ ದಾಸಸಾಹಿತ್ಯ ಎರಡೂ ಒಂದೇ. ಸೂರ‍್ಯನ ಬಿಸಿಲು ನೇರವಾಗಿ ಬಿದ್ದಾಗ ಅದನ್ನು ತಡೆಯಲಾಗದು. ಅದೇ ಚಂದ್ರನ ಮುಖಾಂತರ ಬಂದಾಗ ಶಾಂತಿ, ಸೌಮ್ಯ, ಅಹ್ಲಾಧಕರವೆನಿಸುತ್ತದೆ. ಅದರಂತೆ ಶಾಸ್ತ್ರಸಾಹಿತ್ಯ ಕಠಿಣ. ದಾಸಸಾಹಿತ್ಯ ಬೆಳದಿಂಗಳಂತೆ ಸಾಮಾನ್ಯ ಮನುಷ್ಯನಿಗೂ ಅಹ್ಲಾದಕರ ಆನಂದವನ್ನು ನೀಡುತ್ತದೆ ಎಂದು ನಾಡಿನ ಹಿರಿಯ ಸನ್ಯಾಸಿಗಳಾದ ಪೇಜಾವರ ಮಠಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಇಂದಿಲ್ಲಿ ಹೇಳಿದರು.
ಭಾಗ್ಯನಗರದ ರಾಮನಾಥ ಮಂಗಲ ಕಾರ‍್ಯಾಲಯದಲ್ಲಿ ಮೂರು ದಿನಗಳಿಂದ ಅತ್ಯಂತ ಅದ್ಧೂರಿಂದ ನಡೆಯುತ್ತಿರುವ ಹರಿದಾಸ ಹಬ್ಬದ ಎರಡನೇ ದಿನದ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಹನುಮಂತ ಸಂಜೀವಿನಿ ಗುಡ್ಡವನ್ನು ತರುವಾಗ ಎಡಗೈಯಲ್ಲಿ ತಂದಿದ್ದು ಶಕ್ತಿ.  ರಾಮದೇವರ ಪೂಜೆಗಾಗಿ ಹೂವುಗಳನ್ನು ಎರಡೂ ಕೈಗಳಿಂದ ತಂದಿದ್ದು ಭಕ್ತಿ. ಹನುಮಂತನಲ್ಲಿರುವ ಶಕ್ತಿ ಮತ್ತು ಭಕ್ತಿಗಳನ್ನು ಇಂದಿನ ಯುವಪೀಳಿಗೆ ಬೆಳೆಸಿಕೊಂಡಲ್ಲಿ ಮಧ್ವ ಸಂಪ್ರಾದಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಸಾಧ್ಯವೆಂದು ಹೇಳಿದರು.
ಕಿರಿಯ ಶ್ರೀಪಾದರಾದ ಶ್ರೀ ವಿಶ್ವಪ್ರಸನ್ನತೀರ್ಥರು ರಾಮಾಯಣದಲ್ಲಿ ರಾಮ ಬದುಕಿನಲ್ಲಿ ಹೇಗಿರಬೇಕೆಂಬುದಕ್ಕೆ ಮಾದರೆಯಾದರೆ ರಾವಣ ಜೀವನದಲ್ಲಿ ಹೇಗಿರಬಾರದೆಂಬುದಕ್ಕೆ ಮಾದರಿ. ನಿಸ್ವಾರ್ಥ ಸೇವೆಗೆ ಹನುಮಂತ ಮಾದರಿಯಾಗಿದ್ದಾನೆ. ನಾವು ಕೇವಲ ಸಂಪತ್ತಿನ ಬೆನ್ನು ಬೀಳದೆ ಸಾತ್ವಿಕ ಸಂಪತ್ತು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಪಂ. ಪ್ರದ್ಯುಮ್ನಾಚಾರ್ಯ ಜೋಶಿ, ಇಂದು ದಾಸಸಾಹತ್ಯ ಎಲ್ಲಡೆ ಹರಡಬೇಕಾಗಿದೆ. ಇಂದಿನ ಯುವಪೀಳಿಗೆಗಳಲ್ಲಿ ದಾಸಸಾಹಿತ್ಯದ ಅರಿವನ್ನು ಮೂಡಿಸಬೇಕಾಗಿದೆ. ಆ ಕಾರ‍್ಯವನ್ನು ಬೆಳಗಾವಿ ಹರಿದಾಸ ಸೇವಾ ಸಮಿತಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಬೆಳಿಗ್ಗೆ 8 ಗಂಟೆಗೆ 1008 ಜನರಿಂದ ಸಾಮೂಹಿಕ ಶ್ರೀ ವಿಷ್ಣುಸಹರ್ಸನಾಮ ಪಾರಾಯಣ, ಬೆಳಿಗ್ಗೆ 10 ರಿಂದ ಮ.1 ಗಂಟವರೆಗೆ ಶ್ರೀರಾಮದೇವ ಪೂಜೆ, ಅಭಿಷೇಕ ಹಾಗೂ ತೊಟ್ಟಿಲು ಪೂಜೆ, ಪಂ. ಬಿಂದು ಮಾಧವಾಚಾರ್ಯ ನಾಗಸಂಪಿಗೆ ಹಾಗೂ ಪಂ. ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ ಇವರಿಂದ ಉಪನ್ಯಾಸ ನಂತರ ತೀರ್ಥ ಪ್ರಸಾದ, ಶ್ರೀ ಗುರು ಗೋವಿಂದ ವಿಠಲ ಭಜನಾ ಮಂಡಳ, ಲಕ್ಷ್ಮೀ ಸೋಬಾನ ಭಜನಾ ಮಂಡಳ, ಹರಿಪ್ರಿಯಾ ಭಜನಾ ಮಂಡಳಿ ಹಾಗೂ ಜೈಹರಿ ವಿಠ್ಠಲ ಭಜನಾ ಮಂಡಳಿಗಳಿಂದ ಭಜನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಿದವು. ಅಲ್ಲದೇ ಕೊನೆಯಲ್ಲಿ ಖ್ಯಾತ ಗಾಯಕರಾದ ಡಾ. ಪ್ರಸನ್ನ ಗುಡಿ ಇವರಿಂದ ದಾಶವಾಣಿ ಕಾರ‍್ಯಕ್ರಮ ಜರುಗಿತು.
ಡಾ. ರಾಯಚೂರು ಶೇಷಗಿರಿದಾಸ ಸ್ವಾಗತಿಸಿದರು. ಮುರಳಿಧರ ಕುಲಕರ್ಣಿ ನಿರೂಪಿಸಿದರು.
ಹರಿದಾಸ ಸೇವಾ ಸಮಿತಿಯ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಭೀಮಸೇನ ಮಿರ್ಜಿ, ಸಂಜೀವ ಮೊರಪ್ಪನವರ, ಪ್ರಭಾಕರ ಸರಳಾಯ, ಶ್ರೀಧರ ಹಲಗತ್ತಿ, ನಂದಕುಮಾರ ಕರಗುಪ್ಪಿಕರ, ಅಶೋಕ ದೇಸಾಯಿ ಮುಂತಾದವರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button