Latest

ಸುವರ್ಣ ವಿಧಾನಸೌಧದ ಮುಂದೆ ಗುರುವಾರ ಗುತ್ತಿಗೆ ನೌಕರರ ಪ್ರತಿಭಟನೆ

      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯದಲ್ಲಿ ಸಮಗ್ರ ಶಿಕ್ಷಣ ಯೋಜನೆಯಡಿ ಇರುವ ಕಸ್ತೂರಭಾ ಗಾಂಧಿ ಬಾಲಿಕಾ ವಿದ್ಯಾಲಯ(ಕೆಜಿಬಿವಿ) ಗುತ್ತಿಗೆ ನೌಕರರ ಸಂಘ ಸೇವಾ ಭದ್ರತೆ, ವೇತನ ಹೆಚ್ಚಳ, ಪಿಎಫ್, ಇಎಸ್‌ಐ, ರಜಾ ಸೌಲಭ್ಯ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ನೌಕರರು ಪಾಲ್ಗೊಳ್ಳುತ್ತಿದ್ದಾರೆ.
ಶಿಕ್ಷಣದಿಂದ ಹೊರಗುಳಿದ ಬಾಲಕಿಯರಿಗೆ ಮತ್ತೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಕಸ್ತೂರಭಾ ಗಾಂಧಿ ಬಾಲಿಕಾ ವಿದ್ಯಾಲಯ(ಕೆಜಿಬಿವಿ) ಗಳಲ್ಲಿ ವಾರ್ಡನ್, ಮುಖ್ಯಶಿಕ್ಷಕರು, ಸಹಶಿಕ್ಷಕರು, ಅಕೌಂಟಂಟ್, ದೈಹಿಕ- ಕ್ರಾಫ್ಟ್ ಇತ್ಯಾದಿ ಅನೇಕ ಶಿಕ್ಷಕರು ಅಲ್ಲದೆ ಅಡುಗೆಯವರು ಮತ್ತು ವಾಚ್‌ಮನ್ 10-14 ವರ್ಷಗಳಿಂದ ಹೊರಗುತ್ತಿಗೆ ಮೂಲಕ ದುಡಿಯುತ್ತಿದ್ದಾರೆ.
ಗುತ್ತಿಗೆ ಪದ್ಧತಿಯಡಿ ಸದಾ ಅಭದ್ರತೆಯಿರುವುದರಿಂದ ಹೊರಗುತ್ತಿಗೆ ಏಜೆನ್ಸಿಗಳ ಬದಲು ನೌಕರರನ್ನು ಖಾಯಂಗೊಳಿಸಬೇಕು. ಅಲ್ಲಿಯವರೆಗೆ ಇಲಾಖೆಯಿಂದ ನೇರ ಗುತ್ತಿಗೆ ಮೂಲಕ ಸೇವೆಯಲ್ಲಿ ಮುಂದುವರೆಸಬೇಕೆನ್ನುವುದು ಸಂಘದ ಬೇಡಿಕೆ.
ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ ನೌಕರರನ್ನು ಗುರುತಿಸಿ, ಅಂತಹವರ ಪಟ್ಟಿಯನ್ನು ತಯಾರಿಸಿ ಖಾಯಂ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ವಿಶೇಷ ನಿಯಮಾವಳಿಯನ್ನು ರೂಪಿಸಬೇಕು. ಹೊರಗುತ್ತಿಗೆ ಬದಲು ನೌಕರರಿಗೆ ಇಲಾಖೆಯಿಂದ ನೇರವಾಗಿ ವೇತನ ಸಂದಾಯ ಮಾಡಬೇಕು. ಬೀದರ್, ಕೊಪ್ಪಳ, ರಾಯಚೂರು ಮುಂತಾದ ಕೆಲವು ಜಿಲ್ಲೆಗಳಲ್ಲಿರುವಂತೆ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕಾರ್ಮಿಕರ ಸಹಕಾರಿ ಸಂಘಗಳಂತಹುವುಗಳಿಗೆ ಸಿಬ್ಬಂದಿ ನಿರ್ವಹಣೆ ವಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಮಾನ ಕೆಲಸಕ್ಕೆ ಸಮಾನ ವೇತನದನ್ವಯ ವೇತನ (ಹೆಚ್ಚಳ)ಪರಿಷ್ಕರಣೆ ಮಾಡಬೇಕು. ಅರೆಕಾಲಿಕ ಸಿಬ್ಬಂದಿಯನ್ನು ಪೂರ್ಣಾವಧಿ ಶಿಕ್ಷಕರೆಂದು ಪರಿಗಣಿಸಿ ವೇತನ ಹೆಚ್ಚಿಸಬೇಕು. ಕೆಜಿಬಿವಿ ಸಿಬ್ಬಂದಿಗಳಿಗೆ ನೀಡುವಷ್ಟೇ ವೇತನವನ್ನು ಕೆಕೆಜಿಬಿವಿ ಸಿಬ್ಬಂದಿಗಳಿಗೂ ನೀಡಬೇಕು. ಸಿಬ್ಬಂದಿ ನೌಕರರಿಗೆ ವಸತಿ ಸಮುಚ್ಛಯ ನಿರ್ಮಿಸಿ, ವಸತಿ ಸೌಕರ್ಯ ಕಲ್ಪಿಸಬೇಕು.
ಪ್ರತಿಯೊಬ್ಬ ನೌಕರರ ಪ್ರತ್ಯೇಕ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳ ವೇತನ ಸಂದಾಯವಾಗಬೇಕು.
ನೌಕರರಿಗೆ ಭವಿಷ್ಯನಿಧಿ ಸೌಲಭ್ಯ ಜಾರಿಗೊಳಿಸಬೇಕು. ಹಿಂದಿನ ಎಲ್ಲಾ ಏಜೆನ್ಸಿಗಳು ಪಿಎಫ್ ಕೊಡುಗೆ ಸಂದಾಯ ಮಾಡಿದ ಬಗ್ಗೆ ಮತ್ತು ನೌಕರರ ಖಾತೆ ಸಂಖ್ಯೆ ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ವಾರ್ಡನ್ ಮತ್ತಿತರ ಸಿಬ್ಬಂದಿಗೆ ಹೆರಿಗೆ ಮತ್ತಿತರ ವೈದ್ಯಕೀಯ ಕಾರಣಗಳಿಗೆ ರಜಾ ಸೌಕರ್ಯ ಹೆಚ್ಚಿಸಬೇಕು. ದೀರ್ಘ ರಜೆ ನಂತರ ಮರಳುವವರೆಗೆ ತಾತ್ಕಾಲಿಕ ಪರ್ಯಾಯ ಸಿಬ್ಬಂದಿ ನೇಮಿಸಿ ಪುನಃ ಸೇವೆಗೆ ಪಡೆಯುವುದನ್ನು ಖಾತ್ರಿಪಡಿಸುವಂತೆ ಏಜೆನ್ಸಿಗಳಿಗೆ ಸೂಚಿಸಬೇಕು. ರಾಷ್ಟ್ರೀಯ ಹಬ್ಬಗಳು ಹಾಗೂ ರಜಾ ದಿನಗಳಲ್ಲಿ ಸೇವೆಗೆ ದುಪ್ಪಟ್ಟು ವೇತನ ನೀಡಬೇಕು ಎನ್ನುವುದು ಸಂಘದ ಬೇಡಿಕೆಗಳಾಗಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button