Latest

ಅನುದಾನಿತ ಪದವಿ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

    ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ರಾಜ್ಯದ ಅನುದಾನಿತ ಖಾಸಗಿ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಂತೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಸದನಕ್ಕೆ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಚಿಕ್ಕನಾಯಕನ ಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಅವರ ಪ್ರಶ್ನೆಗೆ ಶಿಕ್ಷಣ ಸಚಿವರು ನೀಡಿದ ಉತ್ತರದಿಂದ ಸದನದಲ್ಲಿ ಗದ್ದಲ ಉಂಟಾದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಯವರು ಬಹಳ ವರ್ಷಗಳಿಂದ ಖಾಸಗಿ ಕಾಲೇಜುಗಳ ಖಾಲಿ ಹುದ್ದೆಗಳ ನೇಮಕಾತಿ ಮಾಡದೇ ಇರುವ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಈ ಕುರಿತಂತೆ ಚರ್ಚಿಸಿ ಖಾಲಿ ಹುದ್ದೆಗಳ ತುಂಬಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಕುರಿತಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ತಮ್ಮ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ ರಾಜ್ಯದ ಖಜಾನೆ ಸಶಕ್ತವಾಗಿದೆ. ರಾಜ್ಯದ ಆರೂವರೆ ಕೋಟಿ ಜನರು ತಮಗೆ ಶಕ್ತಿ ತುಂಬಿದ್ದಾರೆ. ಖಜಾನೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ಶಾಸಕರ ಟೀಕೆಗೆ ಮಾರ್ಮಿಕವಾಗಿ ಮುಖ್ಯಮಂತ್ರಿ ಉತ್ತರಿಸಿದರು.
ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಅಪ್ಪಚ್ಚು ರಂಜನ್, ಮಾಧುಸ್ವಾಮಿ ಸೇರಿದಂತೆ ಹಲವು ಸದಸ್ಯರು ಖಾಸಗಿ ಅನುದಾನಿತ ಕಾಲೇಜುಗಳ ನೇಮಕಾತಿ ವಿಳಂಬದಿಂದ ಸಮಸ್ಯೆ ಗಂಭಿರವಾಗಿದೆ. ಆದ್ಯತೆ ಮೇರೆಗೆ ಪರಿಹರಿಸುವ ಬೇಡಿಕೆ ಇಟ್ಟು ಸಭೆಯಲ್ಲಿ ಚರ್ಚೆಗೆ ಮುಂದಾದಾಗ ಸಭಾಧ್ಯಕ್ಷರು ಈ ಪ್ರಶ್ನೆಯನ್ನು ತಡೆಹಿಡಿಯುತ್ತೇನೆ. ಸದನದಲ್ಲಿ ಚರ್ಚೆ ಬೇಡ ಸದನದ ಹೊರಗಡೆ ಈ ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲು ಅವರು ಸಲಹೆ ನೀಡಿದರು.
ಉನ್ನತ ಶಿಕ್ಷಣ ಸಚಿವರಾದ ಜಿ. ಟಿ. ದೇವೇಗೌಡ ಅವರು ಅನುದಾನಿತ ಪದವಿ ಕಾಲೇಜುಗಳಲ್ಲಿ ೨೦೦೯ ರಿಂದ ೫೫೬೮ ಬೋಧಕ ಹಾಗೂ ೩೯೫೭ ಬೊಧಕೇತರ ಹುದ್ದೆಗಳು ಖಾಲಿ ಉಳಿದಿವೆ. ನಿವೃತ್ತಿ, ನಿಧನ ಹಾಗೂ ರಾಜೀನಾಮೆ ಇತರೆ ಕಾರಣಗಳಿಗಾಗಿ ತೆರವಾಗಿರುವ ಉಪನ್ಯಾಸಕರ ಹುದ್ದೆಗಳ ನೇಮಕಾತಿಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಈವರೆಗೆ ೮೪೩ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಖಾಸಗಿ ಕಾಲೇಜುಗಳಿಂದ ಅನುಮತಿ ಕೋರಲಾಗಿದೆ. ಈ ಪೈಕಿ ೫೧೨ ಹುದ್ದೆಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ, ೩೩೧ ಹುದ್ದೆಗಳಿಗೆ ಸಂಬಂಧಿಸಿದ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಆದರೆ ಬೋಧಕೇತರ ಶಾಶ್ವತ ಅನುದಾನ-ರಹಿತ ಹುದ್ದೆಗಳು ಎಂದು ಪರಿಗಣಿಸಿರುವುದರಿಂದ ಈ ಹುದ್ದೆಗಳ ಭರ್ತಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಬಸವನಗೌಡ ದದ್ದಲ್ ಅವರ ಪ್ರಶ್ನೆಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೆಗೌಡ ಅವರು ರಾಯಚೂರ ಗ್ರಾಮೀಣ ಕ್ಷೇತ್ರದ ಗಿಲ್ಲೇಸುಗೂರ ಹಾಗೂ ಯಾಪಲದಿನ್ನಿಯಲ್ಲಿ ಪದವಿ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತಂತೆ ಸ್ಥಳ ಪರಿಶೀಲನಾ ವರದಿ ಕೇಳಲಾಗಿದೆ ಎಂದು ಹೇಳಿದರು.
ಹೆಗ್ಗಡದೇವನ ಕೋಟೆ ತಾಲ್ಲೂಕು ಸರಗೂರು ಗ್ರಾಮಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ೩.೮೦ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಟ್ಟಡಕ್ಕೆ ನಿವೇಶನ ಒದಗಿಸಿದರೆ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಸಿ ಅನೀಲಕುಮಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button