CrimeKannada NewsLatestNational

*ನಿರ್ಮಾಣ ಹಂತದ ಸೇತುವೆ ಕುಸಿದು 6 ಕಾರ್ಮಿಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬೆತ್ವಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ನಿರ್ಮಾಣ ಹಂತದ ಸೇತುವೆಯ ಭಾರಿ ಗಾತ್ರದ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದ ಪರಿಣಾಮ ಆರು ಜನ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಹಮೀ‌ಪುರ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಗುರುವಾರ ತಡರಾತ್ರಿ ಆ ಭಾಗದಲ್ಲಿ ಬೀಸಿದ ಭೀಕರ ಗಾಳಿ-ಮಳೆ ಹಾಗೂ ಚಂಡಮಾರುತದ ತೀವ್ರತೆಗೆ ಸೇತುವೆಯ ಸ್ಲಾಬ್ ಕುಸಿದಿದೆ ಎನ್ನಲಾಗಿದೆ. 

ಪ್ರತಿದಿನದಂತೆ ಕೆಲಸ ಮುಗಿಸಿ ಕಾರ್ಮಿಕರು ಅದೇ ಸೇತುವೆಯ ಕೆಳಗೆ ಮಲಗಿದ್ದಾಗ ಈ ದುರಂತ ಸಂಭವಿಸಿದೆ. ನಿದ್ದೆಯಲ್ಲಿದ್ದ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮೃತರನ್ನು ಲೋಕೇಂದ್ರ, ಕುಲದೀಪ್ ನಿಶಾದ್, ಸಾವಂತ್ ಯಾದವ್, ಸಭಾಜಿತ್, ಪುಷ್ಟೇಂದ್ರ ಸಿಂಗ್ ಚೌಹಾಣ್ ಮತ್ತು ರಾಜೇಶ್ ಪಾಲ್ ಎಂದು ಗುರುತಿಸಲಾಗಿದೆ.

ಈ ದುರಂತದಲ್ಲಿ ಈವರೆಗೆ ಆರು ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಆತಂಕವಿದೆ. 

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಮತ್ತು ಆಡಳಿತ ಮಂಡಳಿ ಧಾವಿಸಿದ್ದು, ಎಸ್‌ಡಿಆರ್‌ಎಫ್ ತಂಡದ ನೆರವಿನೊಂದಿಗೆ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button