*ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಗೆ ಮತ್ತೆ ಪಾಲಿಕೆ ಹಿಂದೇಟು!*

ಸಾಮಾನ್ಯ ಸಭೆಯಲ್ಲಿ ಕೋಲಾಹಲ; ಮೇಯರ್, ಉಪಮೇಯರ್ ವಿರುದ್ಧ ಸದಸ್ಯರ ಆಕ್ರೋಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯಲ್ಲಿ ಇಂದೇ ಅಂಗೀಕರಿಸಬೇಕು ಎಂಬ ಬೇಡಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ವಿಚಾರವಾಗಿ ಪಾಲಿಕೆ ಸಭೆಯಲ್ಲಿ ಕೋಲಾಹಲ ಉಂಟಾಯಿತು.
ಮೂರು ತಿಂಗಳ ಬಳಿಕ ನಡೆದ ಸಾಮಾನ್ಯ ಸಭೆಯಲ್ಲಿ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ಪಕ್ಷೇತರ ಸದಸ್ಯರು ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ಒತ್ತಾಯಿಸಿದರು. ಆದರೆ ಪಾಲಿಕೆ ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹನುಮಂತ ಕೊಂಗಾಳಿ ಅವರು ಸರ್ಕಾರದ ನಿರ್ದೇಶನಕ್ಕಾಗಿ ಕಾಯುವ ನಿಲುವು ತಳೆದಿದ್ದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ಪಾಲಿಕೆಗೆ ಮನವಿ ಸಲ್ಲಿಸಿವೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗೊತ್ತುವಳಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಸರ್ಕಾರದ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. ಸರ್ಕಾರದಿಂದ ನಿರ್ದೇಶನ ಬಂದ ಬಳಿಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮೇಯರ್ ಹನುಮಂತ ಕೊಂಗಾಳಿ ಸಮಜಾಯಿಷಿ ನೀಡಿದರು.
ಇದಕ್ಕೆ ಸರ್ಕಾರದ ನಾಮನಿರ್ದೇಶಿತ ಹಾಗೂ ಪಕ್ಷೇತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಸೂಚನೆ ಬರುವವರೆಗೆ ಕಾಯುವ ಅಗತ್ಯವಿಲ್ಲ. ನಾವು ಸುಪ್ರೀಂ ಕೋರ್ಟ್‌ನ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಆದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ಗೊತ್ತುವಳಿಯನ್ನು ಇಂದೇ ಪಾಲಿಕೆಯಲ್ಲಿ ಅಂಗೀಕರಿಸಬೇಕು ಎಂದು ಪಟ್ಟು ಹಿಡಿದರು.
ಅಜೀಂ ಪಟ್ವೇಗರ್ ಮಾತನಾಡಿ, ಸರ್ಕಾರದ ಉತ್ತರಕ್ಕಾಗಿ ಕಾಯಬಾರದು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಪಾಲಿಕೆಯಲ್ಲೇ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಎಂಇಎಸ್ ಸದಸ್ಯ ರವಿ ಸಾಳುಂಕೆ ಆಕ್ಷೇಪ ವ್ಯಕ್ತಪಡಿಸಿ, ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವುದರಿಂದ ಈ ರೀತಿಯ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಿದರು. ಇದರಿಂದ ಕನ್ನಡ ಪರ ನಿಲುವಿನ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ರೂಲಿಂಗ್‌ಗೆ ತೀವ್ರ ವಿರೋಧ
ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕ ಸರ್ಕಾರದ ಅಧೀನದಲ್ಲಿದೆ. ಪಾಲಿಕೆಯು ನಾಡು-ನುಡಿಗೆ ಸದಾ ಬದ್ಧವಾಗಿದೆ ಎಂದು ಮೇಯರ್ ಪ್ರೀತಿ ಕಾಮಕರ ರೂಲಿಂಗ್ ನೀಡಿದರು. ಆದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಅಂಗೀಕರಿಸುವ ಕುರಿತು ಸ್ಪಷ್ಟ ರೂಲಿಂಗ್ ನೀಡದಿರುವುದಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಮೇಯರ್ ಅವರ ರೂಲಿಂಗ್ ಅಂತಿಮವಾಗಿದ್ದು, ಸರ್ಕಾರದಿಂದ ನಿರ್ದೇಶನ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮೇಯರ್ ಹನುಮಂತ ಕೊಂಗಾಳಿ ಹೇಳಿದರು.
ಇದರಿಂದ ಸಭೆಯಲ್ಲಿ ಮತ್ತೆ ಗದ್ದಲ ಉಂಟಾಯಿತು. ಸದಸ್ಯರು ‘ಜೈ ಕರ್ನಾಟಕ’ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಸದ್ದುಗದ್ದಲ ಹೆಚ್ಚಾಗುತ್ತಿದ್ದಂತೆ ಮೇಯರ್ ಸಭೆಯನ್ನು ಮುಂದೂಡಿ ಹೊರನಡೆದರು.
ಕರ್ನಾಟಕ ಪರ ಗೊತ್ತುವಳಿ ಅಂಗೀಕಾರದ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಸ್ಪಷ್ಟ ನಿಲುವು ವ್ಯಕ್ತಪಡಿಸದೆ ಮೌನವಾಗಿದ್ದರೆ, ಸರ್ಕಾರದ ನಾಮನಿರ್ದೇಶಿತ ಹಾಗೂ ಪಕ್ಷೇತರ ಸದಸ್ಯರು ಗೊತ್ತುವಳಿ ಅಂಗೀಕಾರಕ್ಕೆ ಒತ್ತಾಯಿಸಿದ್ದು ಸಭೆಯಲ್ಲಿ ಗಮನ ಸೆಳೆಯಿತು.


