Belagavi NewsBelgaum NewsKannada NewsKarnataka NewsLatest

*ಒಳಪಂಗಡಗಳೆಲ್ಲ ಒಗ್ಗಟ್ಟಾದರೆ ಮಾತ್ರ ಲಿಂಗಾಯತ ಸಮಾಜದ ಅಭಿವೃದ್ಧಿ ಸಾಧ್ಯ ; ಸಚಿವ  ಲಕ್ಷ್ಮಣ್ ಸವದಿ* 

ಒಳಪಂಗಡಗಳೆಲ್ಲ ಒಗ್ಗಟ್ಟಾದರೆ ಮಾತ್ರ ಲಿಂಗಾಯತ ಸಮಾಜದ ಅಭಿವೃದ್ಧಿ ಸಾಧ್ಯ ; ಸಚಿವ  ಲಕ್ಷ್ಮಣ್ ಸವದಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ; ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ೧೦೮ ಒಳಪಂಗಡಗಳು ಒಂದಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯದ ಸಹಕಾರ ಸಚಿವ ಲಕ್ಷ್ಮಣ್ ಸವದಿ ಹೇಳಿದರು .
ಅವರು ಬೆಳಗಾವಿಯಲ್ಲಿಂದು  ಬಸವ ಜಯಂತಿ ಉತ್ಸವ ಸಮಿತಿ-೨೦೨೬ರ ಪರವಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.


ಒಳಪಂಗಡಗಳನ್ನೆಲ್ಲ ಒಂದುಗೂಡಿಸುವ ಇಂದಿನ ಕಾರ‍್ಯಕ್ರಮ ಬೆಳಗಾವಿಯಿಂದ ಆರಂಭವಾಗಿ ರಾಜ್ಯದ ತುಂಬೆಲ್ಲ ವ್ಯಾಪಿಸಬೇಕು, ಸಣ್ಣ ಸಣ್ಣ ಸಮಾಜಗಳಿಗೆ ಬಲ ನೀಡಬೇಕು, ಬೇರೆಯವರ ಅನ್ನಕ್ಕೆ ಕೈ ಹಾಕುವುದು ಬೇಡ. ನಮ್ಮ ಅನ್ನಕ್ಕೆ ಬೇರೊಬ್ಬರು ಕೈ ಹಾಕಲು ಬಿಡುವುದು ಬೇಡ. ಆಗ ಮಾತ್ರ ಬಸವಣ್ಣನವರು ಆಶಿಸಿದ ಬದಲಾವಣೆ ಸಾಧ್ಯ ಎಂದರು.
ಎಲ್ಲ ೧೫ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ತಾವೆಲ್ಲ ಸೇರಿ ಸಮಾಜದ ಪರವಾಗಿ ನೀಡಿದ ಗೌರವ ನನಗೆ ಶ್ರೀರಕ್ಷೆ, ಹೆಚ್ಚಿನ ಜವಾಬ್ದಾರಿ ನೀಡಿದಂತಾಗಿದೆ. ಒಗ್ಗಟ್ಟಾದರೆ ಫಲ ಖಚಿತ, ಒಳಪಂಗಡಗಳಿಂದ ಸಮಾಜಕ್ಕೆ ಹಾನಿ. ಇದನ್ನು ಅರಿತು ನಡೆಯಬೇಕು ಎಂದವರು ಹೇಳಿದರು.
ಮಾಜಿ ಸಂಸದ ರಮೇಶ ಕತ್ತಿ ಅವರು ಮಾತನಾಡಿ ಇಂದು ನಮ್ಮಲ್ಲಿನ ತಪ್ಪುಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇತಿಹಾಸವನ್ನು ನೋಡಿದಾಗ ಹಿಂದೊಮ್ಮೆ ೯೪ ಶಾಸಕರನ್ನು ಹೊಂದಿದ್ದ ಸಮಾಜ ಇಂದು ೫೫ ಶಾಸಕರ ಸಂಖ್ಯೆಗೆ ಇಳಿದಿದೆ, ಇದಕ್ಕೆ ಕಾರಣ ನಮ್ಮಲ್ಲಿನ ಭಿನ್ನಾಭಿಪ್ರಾಯ ಮತ್ತು ಒಳಪಂಗಡಗಳ ಒಡಕುಗಳು. ನಾವೆಲ್ಲ ಒಂದಾಗಲೇಬೇಕು, ಸಮಸ್ತರಿಗೂ ಬಾಗಿಲು ತೆರೆಯುವ ಲಿಂಗಾಯಿತರು ಎಲ್ಲಿ ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ಚಿಂತನೆ ಮಾಡಿ ನಾವೆಲ್ಲ ಒಂದಾಗದೆ ಇದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ, ಮುಂದೊಂದು ದಿನ ನಮ್ಮ ರಾಜಕೀಯ ಮತ್ತು ಸಾಮಾಜಿಕ ಅಸ್ತಿತ್ವಕ್ಕಾಗಿ ಹುಡುಕಾಡಬೇಕಾದ ಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಶಾಸಕ ಅಶೋಕ್ ಪಟ್ಟಣ ಮಾತನಾಡಿ, ಸಮಸ್ತ ಸಮಾಜವನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಸ್ವಾಮೀಜಿಗಳು ವಹಿಸಿಕೊಳ್ಳಬೇಕು. ಅತ್ಯಂತ ದೊಡ್ಡ ಸಮಾಜ ನಮ್ಮದಾಗಿದ್ದರೂ ನಮ್ಮಲ್ಲಿ ಸಮನ್ವಯತೆ ಇಲ್ಲದಂತಾಗಿದೆ, ನಾವೆಲ್ಲ ಒಂದಾಗಿದ್ದೆ ಆದಲ್ಲಿ ರಾಜ್ಯದಲ್ಲಿ ನಾವೇ ನಂಬರ್ ಒನ್ ಆಗುತ್ತೇವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.


ಕಾರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ಗದುಗಿನ ತೋಂಟದಾರ‍್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು. ಬೆಳಗಾವಿ ಕಾರಂಜಿ ಮಠದ ಶ್ರೀ. ಗುರುಸಿದ್ಧ ಮಹಾಸ್ವಾಮೀಜಿಯವರು, ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ವಹಿಸಿದ್ದರು .

ಮುಖ್ಯ ಅತಿಥಿಗಳಾಗಿ ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಂಸದೆ ಮಂಗಳಾ ಅಂಗಡಿ,  ಬಾಬಾ ಸಾಹೇಬ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ,  ಮಾಜಿ ಶಾಸಕರಾದ ಮಹಾಂತೇಶ ದೊಡ್ಡ ಗೌಡರ್, ವಿಶ್ವನಾಥ ಪಾಟೀಲ್, ಜಗದೀಶ್ ಮೆಟಗುಡ್ , ಎಸ್ ಸಿ ಮಾಳಗಿ, ಬೆಳಗಾವಿ ಮೇಯರ್ ಪ್ರೀತಿ ಕಾಮಕರ್, ಡೆಪ್ಯುಟಿ ಮೇಯರ್ ಹನುಮಂತ ಕೊಂಗಾಲಿ, ಮಲ್ಲಣ್ಣ ಯಾದವಾಡ, ಡಾ. ಮಹಾಂತೇಶ್ ಕಡಾಡಿ, ಮುರುಗೇಂದ್ರ ಪಾಟೀಲ್, ಡಾ. ರವಿ ಪಾಟೀಲ್, ಉಮೇಶ್ ಬಾಳಿ, ಮನೋಹರ್ ಪುಡಕಲಕಟ್ಟಿ , ಗುಂಡು ಪಾಟೀಲ್, ಜಗದೀಶ್ ಪೂಜಾರಿ, ಪಂಚನಗೌಡ ದ್ಯಾಮನಗೌಡರ್, ಶಂಕರ್ ಗುಡುಸ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಾಮಾಜಿಕ ಕಾರ‍್ಯಕರ‍್ತ ಭೀಮಪ್ಪ ಗಡಾದ್, ಬೆಳಗಾವಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷೆ ಸರಳಾ  ಹೇರೆಕರ, ವಿನಯ ನಾವಲಗಟ್ಟಿ ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ‍್ಯಕ್ರಮದ ನಿರ‍್ವಹಣೆಯನ್ನು ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಮತ್ತು ಆನಂದ್ ಗುಡುಸ್  ನಿರ‍್ವಹಿಸಿದರು. ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸ್ವಾಗತಿಸಿದರು. ಈರಣ್ಣ ದೇಯಣ್ಣವರ್ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button