Kannada NewsNationalPolitics

*ಲೋಕಸಭಾ ಕ್ಷೇತ್ರಗಳ ಸಂಖ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಕೇಂದ್ರ ಸಂಪುಟ ಅಸ್ತು*

ಪ್ರಗತಿವಾಹಿನಿ ಸುದ್ದಿ: ಮುಂಬರುವ ಸಂಸತ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಮಹತ್ವದ ಸಂವಿಧಾನ ತಿದ್ದುಪಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ದೇಶದ ಎಲ್ಲ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ನಿರ್ಧಾರ ಜಾರಿಯಾದರೆ ಪ್ರಸ್ತುತ 543 ಇರುವ ಲೋಕಸಭಾ ಸ್ಥಾನಗಳ ಸಂಖ್ಯೆ ಸುಮಾರು 815ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭೆಯಲ್ಲಿ ಸಿಗುತ್ತಿರುವ ಪ್ರಾತಿನಿಧ್ಯ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಸೂತ್ರ ರೂಪಿಸಲಾಗಿದೆ. ಜನಗಣತಿಯ ಆಧಾರದಲ್ಲೇ ರಾಜ್ಯಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವುದರಿಂದ ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತದಲ್ಲಿ ವ್ಯತ್ಯಾಸವಾಗುವುದಿಲ್ಲ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

ಈ ಬದಲಾವಣೆಗಳ ಮೂಲಕ ಮಹಿಳಾ ಮೀಸಲಾತಿ ಕಾಯ್ದೆಯನ್ನು ಶೀಘ್ರವಾಗಿ ಜಾರಿಗೆ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಈ ಹಿಂದೆ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಕ್ಷೇತ್ರ ಪುನರ್ವಿಂಗಡಣೆ ನಡೆಸುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಗತ್ಯ ಬೆಂಬಲ ದೊರೆಯದೆ ವಿಫಲವಾಗಿತ್ತು. ಇದೀಗ ವಿಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಆತಂಕ ನಿವಾರಿಸುವ ಉದ್ದೇಶದಿಂದ ಹೊಸ ತಿದ್ದುಪಡಿಗಳೊಂದಿಗೆ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಇನ್ನೊಂದೆಡೆ, ಪ್ರಾದೇಶಿಕ ಸಮತೋಲನ ಕಾಪಾಡುವ ಭರವಸೆ ನೀಡಿದರೆ ಮಸೂದೆಗೆ ಬೆಂಬಲ ನೀಡಲು ಸಿದ್ಧವಿರುವುದಾಗಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ತಿಳಿಸಿದೆ.

ಒಟ್ಟಾರೆ, ಈ ಪ್ರಸ್ತಾವನೆ ಜಾರಿಯಾದರೆ ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಮಹಿಳಾ ಮೀಸಲಾತಿ ಜಾರಿಗೆ ಹಾದಿ ಸುಗಮವಾಗುವ ನಿರೀಕ್ಷೆಯಿದೆ.

Related Articles

Back to top button