*ಪಶ್ಚಿಮ ಘಟ್ಟವನ್ನು ಮನುಷ್ಯರಿಂದ ರಕ್ಷಿಸಬೇಕೇ?* *ಈಗ ಮನುಷ್ಯರನ್ನೇ ಪಶ್ಚಿಮ ಘಟ್ಟದಿಂದ ರಕ್ಷಿಸಬೇಕಾದ ಕಾಲ!*

ಪಶ್ಚಿಮ ಘಟ್ಟವನ್ನು ಮನುಷ್ಯರಿಂದ ರಕ್ಷಿಸಬೇಕೇ?
ಈಗ ಮನುಷ್ಯರನ್ನೇ ಪಶ್ಚಿಮ ಘಟ್ಟದಿಂದ ರಕ್ಷಿಸಬೇಕಾದ ಕಾಲ!
ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿಗಳ ಚರ್ಚೆಯ ನಡುವೆ ಬದಲಾಗಿರುವ ಪಶ್ಚಿಮ ಘಟ್ಟದ ವಾಸ್ತವವನ್ನು ಗಮನಿಸುವ ಅಗತ್ಯವಿದೆ
ಪಶ್ಚಿಮ ಘಟ್ಟವನ್ನು ಹೇಗೆ ರಕ್ಷಿಸಬೇಕು?
ಪಶ್ಚಿಮ ಘಟ್ಟದಲ್ಲಿ ವಾಸಿಸುವ ಜನರನ್ನು ಹೇಗೆ ಉಳಿಸಬೇಕು?
ಅಲ್ಲಿನ ಪರಿಸರವನ್ನು ಹೇಗೆ ಸಂರಕ್ಷಿಸಬೇಕು?
ಈ ಪ್ರಶ್ನೆಗಳು ಹೊಸದಲ್ಲ.
ಕಳೆದ 15–16 ವರ್ಷಗಳಿಂದ ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಮಾಧವ ಗಾಡ್ಗೀಳ್ ಸಮಿತಿ ವರದಿ, ಕಸ್ತೂರಿ ರಂಗನ್ ಸಮಿತಿ ವರದಿ, ಪರಿಸರ ಸೂಕ್ಷ್ಮ ವಲಯ, ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷ… ಹೀಗೆ ಒಂದಲ್ಲ ಒಂದು ವಿಚಾರ ಸದಾ ಚರ್ಚೆಯಲ್ಲಿದೆ.
ಆದರೆ, ಈ ಎಲ್ಲಾ ಚರ್ಚೆಗಳ ನಡುವೆ ಬಹುಶಃ ಒಂದು ಮುಖ್ಯವಾದ ಸಂಗತಿಯನ್ನು ನಾವು ಗಮನಿಸದೇ ಹೋಗಿದ್ದೇವೆ.
ಕಳೆದ 15 ವರ್ಷಗಳಲ್ಲಿ ಪಶ್ಚಿಮ ಘಟ್ಟದ ಜನಜೀವನವೇ ಬಹಳ ಬದಲಾಗಿದೆ.
ಅದು ಪರಿಸರ ರಕ್ಷಣೆಯ ಕಾರಣದಿಂದ ಬದಲಾಗಿಲ್ಲ.
ಪರಿಸರದಿಂದಲೇ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದರಿಂದ ಬದಲಾಗಿದೆ!
ಒಂದು ಕಾಲದಲ್ಲಿ ಪಶ್ಚಿಮ ಘಟ್ಟದ ಹಳ್ಳಿಗಳಲ್ಲಿ ಯುವಕರಿದ್ದರು. ಹೊಲ-ತೋಟಗಳಿದ್ದರು. ಕಾಡಿನೊಂದಿಗೆ ಬದುಕಿನ ನೇರ ಸಂಬಂಧವಿತ್ತು. ಬೆಟ್ಟ ಹತ್ತುವುದು, ಮರ ಕಡಿಯುವುದು, ಗದ್ದೆ-ತೋಟ ನೋಡಿಕೊಳ್ಳುವುದು, ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸುವುದು… ಇವೆಲ್ಲವೂ ಅಲ್ಲಿನ ಬದುಕಿನ ಸಹಜ ಭಾಗವಾಗಿತ್ತು.
ಆದರೆ ಇಂದು?
ಆ ಹಳ್ಳಿಗಳಲ್ಲಿ ಉಳಿದಿರುವವರಲ್ಲಿ ಬಹುಪಾಲು 40 ವರ್ಷ ಮೇಲ್ಪಟ್ಟವರು.
ಕಳೆದ ಒಂದೂವರೆ ದಶಕದಲ್ಲಿ ಉದ್ಯೋಗಕ್ಕಾಗಿ ಲಕ್ಷಾಂತರ ಯುವಕರು ನಗರಗಳತ್ತ ತೆರಳಿದ್ದಾರೆ. ಶಿಕ್ಷಣ ಪಡೆದವರು ಮಾತ್ರವಲ್ಲ; ಕೃಷಿ ಕುಟುಂಬಗಳ ಯುವಕರೂ ಕೂಡ ನಗರಗಳಲ್ಲಿ ಉದ್ಯೋಗ ಹುಡುಕಿಕೊಂಡಿದ್ದಾರೆ.
ಹಳ್ಳಿಯಲ್ಲಿರುವ ಸಣ್ಣ ಹಿಡುವಳಿದಾರ ಕುಟುಂಬಗಳ ಪರಿಸ್ಥಿತಿ ಇನ್ನೂ ವಿಚಿತ್ರ.
ಬಹುತೇಕ ಕುಟುಂಬಗಳಲ್ಲಿ ಯುವ ಪೀಳಿಗೆ ನಗರದಲ್ಲಿದೆ. ಊರಿನಲ್ಲಿ ಅಪ್ಪ-ಅಮ್ಮ, ಕೆಲವೊಮ್ಮೆ ವೃದ್ಧ ದಂಪತಿ ಮಾತ್ರ.
ದೊಡ್ಡ ಹಿಡುವಳಿದಾರರಿಗೆ ಮಾತ್ರ ಪರಿಸ್ಥಿತಿ ಸ್ವಲ್ಪ ಭಿನ್ನ. ಕೃಷಿಯಿಂದ ನಗರ ಉದ್ಯೋಗಕ್ಕಿಂತ ಉತ್ತಮ ಆದಾಯ ಬರುತ್ತಿದ್ದರೆ ಅವರು ಇನ್ನೂ ತಮ್ಮ ಜಮೀನಿನೊಂದಿಗೆ ಉಳಿಯಲು ಸಿದ್ಧರಾಗಿದ್ದಾರೆ.
ಆದರೆ ಸಣ್ಣ ಹಿಡುವಳಿದಾರ?
ಕೃಷಿ ಮಾಡಬೇಕೋ, ಬದುಕಬೇಕೋ ಎಂಬ ಗೊಂದಲದಲ್ಲೇ ಜೀವನ ಸಾಗಿಸುತ್ತಿದ್ದಾನೆ.
ಹಾಗೆ ನೋಡಿದರೆ, ಇನ್ನೊಂದು 20–30 ವರ್ಷಗಳಲ್ಲಿ ಪಶ್ಚಿಮ ಘಟ್ಟದ ಅನೇಕ ಹಳ್ಳಿಗಳ ಚಿತ್ರಣ ಇನ್ನಷ್ಟು ಬದಲಾಗಲಿದೆ.
ಇಂದು ಅಲ್ಲಿರುವ ಹಿರಿಯ ಪೀಳಿಗೆ ನಿಧಾನವಾಗಿ ಕಡಿಮೆಯಾಗುತ್ತದೆ. ಅವರ ಮಕ್ಕಳು ಈಗಾಗಲೇ ನಗರಗಳಲ್ಲಿ ನೆಲೆಸಿದ್ದಾರೆ. ಮುಂದಿನ ಪೀಳಿಗೆಗೆ ಆ ಹಳ್ಳಿಗಳೊಂದಿಗೆ ಭಾವನಾತ್ಮಕ ಸಂಬಂಧವಿದ್ದರೂ, ಬದುಕಿನ ಸಂಬಂಧ ಇರುವ ಸಾಧ್ಯತೆ ಕಡಿಮೆ.
ಹೀಗಾದರೆ ಒಂದು ಪ್ರಶ್ನೆ ಎದುರಾಗುತ್ತದೆ.
ಮಾಧವ ಗಾಡ್ಗೀಳ್ ವರದಿಯಲ್ಲಿ ಹೇಳಲಾಗಿದ್ದಂತೆ, ಪಶ್ಚಿಮ ಘಟ್ಟದ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಅಗತ್ಯವೇ ನಿಜವಾಗಿಯೂ ಉಳಿದಿದೆಯೇ?
ಆರ್ಥಿಕ ಕಾರಣಗಳಿಂದಲೇ ದೊಡ್ಡ ಪ್ರಮಾಣದಲ್ಲಿ ಜನರು ಈಗಾಗಲೇ ನಗರಗಳಿಗೆ ತೆರಳಿದ್ದಾರೆ.
ಉಳಿದವರೂ ವಯಸ್ಸಾದ ನಂತರ, ಮುಂದಿನ 20–30 ವರ್ಷಗಳಲ್ಲಿ ಅಲ್ಲಿಂದ ದೂರವಾಗುವ ಸಾಧ್ಯತೆ ಇದೆ.
ಅಂದರೆ, ಪರಿಸರ ಸೂಕ್ಷ್ಮ ವಲಯ ನಿರ್ಮಿಸುವುದಕ್ಕಾಗಿ ಮನುಷ್ಯರನ್ನು ಹೊರಗೆ ಕಳುಹಿಸುವ ಅಗತ್ಯವಿಲ್ಲದ ಪರಿಸ್ಥಿತಿಯೇ ಸಹಜವಾಗಿ ನಿರ್ಮಾಣವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ.
ಆದರೆ ಇದೇ ಸಂದರ್ಭದಲ್ಲಿ ಇನ್ನೊಂದು ವಿಚಿತ್ರ ಬದಲಾವಣೆ ನಡೆದಿದೆ.
ಒಂದು ಕಾಲದಲ್ಲಿ ಪಶ್ಚಿಮ ಘಟ್ಟದ ಜನರು ಕಾಡನ್ನು ಎದುರಿಸುತ್ತಿದ್ದರು. ಈಗ ಕಾಡು ಮತ್ತು ಕಾಡುಪ್ರಾಣಿಗಳನ್ನೇ ಎದುರಿಸುವ ಪರಿಸ್ಥಿತಿ ಅವರದ್ದು!
ಇಪ್ಪತ್ತು ವರ್ಷಗಳ ಹಿಂದೆ ಬೆಟ್ಟದ ತುದಿಗಳಿಂದ ದೊಡ್ಡ ಮರಗಳನ್ನು ಕಡಿದು, ಅವುಗಳನ್ನು ಹಲಗೆಗಳಾಗಿ, ತೊಲೆಗಳಾಗಿ ಮಾಡಿ ಮನೆ ಕಟ್ಟಿಕೊಳ್ಳುತ್ತಿದ್ದ ಜನರನ್ನು ಕಾಣಬಹುದಿತ್ತು.
ಇಂದು ಅದೇ ಜನರಿಗೆ ಆ ಬೆಟ್ಟ ಹತ್ತುವುದೇ ಕಷ್ಟ.
ವಯಸ್ಸಾಗಿದೆ.
ಮಕ್ಕಳು ನಗರದಲ್ಲಿದ್ದಾರೆ.
ಮನೆ ಕಟ್ಟಬೇಕಾದರೆ ಕಾಡಿನಿಂದ ಮರ ಕಡಿಯುವ ಬದಲು ಬಯಲುಸೀಮೆಯ ಕಾರ್ಖಾನೆಯಲ್ಲಿ ತಯಾರಾದ ಸಿಮೆಂಟ್, ಕಬ್ಬಿಣ, ಇಟ್ಟಿಗೆಗಳನ್ನು ಖರೀದಿಸಿ ಮನೆ ಕಟ್ಟುತ್ತಾರೆ.
ಅಂದರೆ, ಅವರ ಜೀವನಶೈಲಿಯೇ ಬದಲಾಗಿದೆ.
ಒಂದು ಕಾಲದಲ್ಲಿ ಕಾಡಿನ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದ್ದ ಬದುಕು ಇಂದು ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ.
ಇದರ ಪರಿಣಾಮವಾಗಿ ಕಾಡಿನ ಮೇಲೆ ಮನುಷ್ಯನ ಒತ್ತಡವೂ ಹಲವು ಕಡೆಗಳಲ್ಲಿ ಕಡಿಮೆಯಾಗಿರಬಹುದು.
ಆದರೆ, ಕಾಡಿನ ಒತ್ತಡ ಮನುಷ್ಯನ ಮೇಲೆ ಹೆಚ್ಚಾಗಿದೆ.
ಹಂದಿಗಳ ಕಾಟವನ್ನೇ ತೆಗೆದುಕೊಳ್ಳಿ.
ಹಿಂದೆ ತೋಟಕ್ಕೆ ಕಾಡುಹಂದಿ ಬಂದರೆ, ಅದನ್ನು ಹೇಗೆ ಓಡಿಸಬೇಕು, ಹೇಗೆ ನಿಯಂತ್ರಿಸಬೇಕು ಎಂಬುದನ್ನು ಅಲ್ಲಿನ ಜನರು ತಿಳಿದಿದ್ದರು.
ಅವರಿಗೆ ಸಮಯವಿತ್ತು.
ದೇಹದಲ್ಲಿ ಕಸುವಿತ್ತು.
ಅನುಭವವಿತ್ತು.
ಅಗತ್ಯವೂ ಇತ್ತು.
ಇಂದು ಅದೇ ತೋಟಕ್ಕೆ ಹಂದಿಗಳು ಹಿಂಡುಹಿಂಡಾಗಿ ಬರುತ್ತವೆ.
ಹೊಸದಾಗಿ ಅಡಿಕೆ ಗಿಡ ನೆಟ್ಟಿದ್ದೀರಾ?
ಒಂದೇ ರಾತ್ರಿ ಸಾಕು.
ಹಂದಿ ಬಂದು ಮಣ್ಣನ್ನು ಅಗೆದು, ಗಿಡದ ಬುಡವನ್ನು ಜಗಿದು, ಇಡೀ ಪ್ರಯತ್ನವನ್ನೇ ಹಾಳು ಮಾಡಬಹುದು.
ಬಾಳೆಗಿಡಗಳ ಕಥೆಯೂ ಅದೇ.
ಒಂದು ಕಾಲದಲ್ಲಿ ಮನೆ ಅಂಗಳದಲ್ಲಿ ಹತ್ತಾರು ಬಾಳೆಗಿಡಗಳಿರುತ್ತಿದ್ದವು.
ಇಂದು ಕೆಲವೊಂದು ಹಳ್ಳಿಗಳಲ್ಲಿ ಒಂದೋ ಎರಡೋ ಬಾಳೆಗಿಡಗಳು ಹಂದಿಗಳ ದಾಳಿಯಿಂದ ಬದುಕುಳಿಯಲು ಹೋರಾಡುತ್ತಿವೆ.
ಮಂಗಗಳ ಕಥೆಯಂತೂ ಇನ್ನೂ ಮಜವಾಗಿದೆ.
ಪಶ್ಚಿಮ ಘಟ್ಟದ ಅನೇಕ ಹಳ್ಳಿಗಳಲ್ಲಿ ನುಗ್ಗೆ ಮರ, ಪಪ್ಪಾಯ ಗಿಡ, ತರಕಾರಿ ತೋಟ ಇತ್ಯಾದಿ ಕಾಣುವುದೇ ಅಪರೂಪವಾಗುತ್ತಿದೆ.
ಒಂದುವೇಳೆ ಯಾರಾದರೂ ಧೈರ್ಯ ಮಾಡಿ ನುಗ್ಗೆ ಮರ ಬೆಳೆಸಿದರೆ, ಮಂಗಗಳಿಗೆ ಅದರ ಸುದ್ದಿ ತಲುಪಲು ಹೆಚ್ಚು ಸಮಯ ಬೇಕಾಗುವುದಿಲ್ಲ!
ಪಪ್ಪಾಯ ಗಿಡ?
ಅದೂ ಅದೇ.
ತರಕಾರಿ ಬೆಳೆಸುವುದು?
ಮಂಗಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಂತೆ!
ಪಶ್ಚಿಮ ಘಟ್ಟದ ಮಣ್ಣು ಫಲವತ್ತಾಗಿದೆ. ಮನೆಯ ಅಂಗಳದಲ್ಲೇ ಗೊಬ್ಬರ ಇದೆ. ಒಂದು ಸೌತೆಕಾಯಿಯ ಬೀಜ ಎಸೆದರೂ ಅದು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ.
ಆದರೆ ಅದರ ನಂತರ?
ಮಂಗಗಳ ಸರದಿ.
ಹೀಗಾಗಿ ಇಂದು ಪಶ್ಚಿಮ ಘಟ್ಟದ ಕೆಲವು ಹಳ್ಳಿಗಳಲ್ಲಿ ತರಕಾರಿ ಸಂತೆ ನಡೆಯುತ್ತದೆ.
ಬಯಲುಸೀಮೆಯಲ್ಲಿ ಬೆಳೆದ ತರಕಾರಿ ಲಾರಿಯಲ್ಲಿ ಬಂದು ಇಲ್ಲಿ ಮಾರಾಟವಾಗುತ್ತದೆ.
ಅದನ್ನು ಜನರು ಖರೀದಿಸಿ, ಫ್ರಿಜ್‌ನಲ್ಲಿ ಇಟ್ಟುಕೊಂಡು ದಿನಗಟ್ಟಲೆ ತಿನ್ನುತ್ತಾರೆ.
ಇನ್ನೂ ಒಂದು ಸಮಾಧಾನವಿದೆ.
ಸದ್ಯಕ್ಕೆ ಮಂಗಗಳಿಗೆ ಫ್ರಿಜ್ ಬಾಗಿಲು ತೆರೆಯಲು ಧೈರ್ಯ ಬಂದಿಲ್ಲ!
ಅದು ಬಂದ ದಿನ, ಪಶ್ಚಿಮ ಘಟ್ಟದ ಜನರ ಜೀವನ ಇನ್ನೂ ಕಷ್ಟವಾಗಬಹುದು!
ಅಲ್ಲಿನ ವೃದ್ಧರ ಬದುಕು ಇನ್ನೊಂದು ರೀತಿಯ ವ್ಯಂಗ್ಯ.
ಅವರ ಮಕ್ಕಳು ವರ್ಷಕ್ಕೊಮ್ಮೆ, ಎರಡು ಬಾರಿ ಊರಿಗೆ ಬಂದು ಅಪ್ಪ-ಅಮ್ಮನನ್ನು ನೋಡಿಕೊಂಡು ಹೋಗಬಹುದು.
ಆದರೆ ಹಂದಿಗಳು?
ಮಂಗಗಳು?
ಅವುಗಳ ಭೇಟಿ ನಿಯಮಿತ!
ಕೆಲವೊಮ್ಮೆ ಮಕ್ಕಳಿಗಿಂತಲೂ ಹೆಚ್ಚು ಬಾರಿ!
ಹಬ್ಬಕ್ಕೆ, ಹುಣ್ಣಿಮೆಗೆ ಊರಿಗೆ ಬಂದ ಮಕ್ಕಳು ತಮ್ಮದೇ ಮೂರು-ನಾಲ್ಕು ಗುಂಟೆ ಜಮೀನಿನಲ್ಲಿ ಸ್ವಲ್ಪ ಹೊತ್ತು ಕಾಲಾಡಿಸುವುದಕ್ಕೂ ಸಮಯ ಹುಡುಕಬೇಕು.
ಅವರಿಗೆ ಬೆಟ್ಟ ಹತ್ತುವುದು ಹೇಗೆ ಸಾಧ್ಯ?
ಮರ ಕಡಿಯುವುದು ಹೇಗೆ?
ಹಂದಿ ಓಡಿಸುವುದು ಹೇಗೆ?
ಮಂಗಗಳನ್ನು ಹೆದರಿಸುವುದು ಹೇಗೆ?
ನಗರದ ಜೀವನವೇ ಅವರಿಗೆ ಹೊಸ ಬದುಕಾಗಿದೆ.
ಊರಿನಲ್ಲಿ ಉಳಿದಿರುವ ಕೆಲ ಯುವಕರ ಪರಿಸ್ಥಿತಿಯೂ ಹೆಚ್ಚು ಭಿನ್ನವಾಗಿಲ್ಲ.
ನಗರಕ್ಕೆ ಹೋಗಿ ಕೆಲಸ ಮಾಡಿ ಸಂಜೆ ಮನೆಗೆ ಬರುವಾಗ ಕಪ್ಪು ಪ್ಲಾಸ್ಟಿಕ್ ಚೀಲದಲ್ಲಿ ಹಂದಿ ಮಾಂಸವನ್ನೋ, ಕೋಳಿ ಮಾಂಸವನ್ನೋ ತಂದು ಅಡುಗೆ ಮಾಡಿಕೊಂಡು ತಿನ್ನುವುದು ಸುಲಭ.
ಹಂದಿ ಹೊಡೆಯುವುದಕ್ಕೆ ಯಾರು ಹೋಗುತ್ತಾರೆ?
ಸಮಯವಿಲ್ಲ.
ಆಸಕ್ತಿಯಿಲ್ಲ.
ದೇಹದಲ್ಲಿ ಹಿಂದಿನ ಕಸುವಿಲ್ಲ.
ಅಗತ್ಯವೂ ಇಲ್ಲ.
ಅಷ್ಟೇ ಅಲ್ಲ, ಊರಿನಲ್ಲಿ ಈಗ ಮಾಂಸ ಸಿಗುತ್ತದೆ. ಬಾರ್‌ಗಳೂ ಇವೆ.
ಹೀಗಿರುವಾಗ ಕಾಡಿನೊಳಗೆ ಹೋಗಿ ಅಪಾಯ ತೆಗೆದುಕೊಳ್ಳುವ ಅಗತ್ಯವೇನು?
ಒಂದು ವೇಳೆ ಯಾರಾದರೂ ಧೈರ್ಯ ಮಾಡಿ ಕಾಡುಪ್ರಾಣಿಯನ್ನು ಕೊಂದರೆ, ಕಾನೂನಿನ ಪ್ರಶ್ನೆ ಎದುರಾಗುತ್ತದೆ.
ಅರಣ್ಯ ಇಲಾಖೆಗೆ ಮಾಹಿತಿ ಹೋಗುತ್ತದೆ.
ಕೇಸ್ ಆಗಬಹುದು.
ಜೈಲು ಹೋಗುವ ಪರಿಸ್ಥಿತಿ ಬರಬಹುದು.
ಆ ಕಡೆ ಮನುಷ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೆ, ಈ ಕಡೆ ಹಂದಿ ಅವನ ಮನೆಯ ತೋಟದಲ್ಲಿರುವ ಅಡಕೆ ಮರಗಳನ್ನೂ ಬಾಳೆ ಗಿಡಗಳನ್ನೂ ಎಣಿಸುತ್ತಿರುತ್ತದೆ!
ಇದು ವ್ಯಂಗ್ಯವಾಗಿ ಕಾಣಬಹುದು.
ಆದರೆ ಅದರ ಹಿಂದೆ ಒಂದು ಗಂಭೀರವಾದ ಗ್ರಾಮೀಣ ವಾಸ್ತವವಿದೆ.
ಕಳೆದ 15–20 ವರ್ಷಗಳಲ್ಲಿ ಪಶ್ಚಿಮ ಘಟ್ಟದ ಹಲವು ಪ್ರದೇಶಗಳಲ್ಲಿ ಕಾಡುಪ್ರಾಣಿಗಳಿಂದ ಬೆಳೆಹಾನಿ ಹೆಚ್ಚಾಗಿದೆ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಿವೆ.
ಇದರ ನಡುವೆ ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಕಾನೂನುಗಳೂ ಹೆಚ್ಚು ಕಟ್ಟುನಿಟ್ಟಾಗಿವೆ.
ಇದು ಪರಿಸರದ ದೃಷ್ಟಿಯಿಂದ ಏಕೆ ಅಗತ್ಯವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಆದರೆ ಅದರ ಜೊತೆಗೆ ಇನ್ನೊಂದು ಪ್ರಶ್ನೆಯನ್ನೂ ಕೇಳಬೇಕಾಗಿದೆ.
ಕಾಡುಪ್ರಾಣಿಗಳನ್ನು ರಕ್ಷಿಸುವ ವ್ಯವಸ್ಥೆಯಲ್ಲಿ, ಅವುಗಳಿಂದ ಜೀವನೋಪಾಯಕ್ಕೆ ತೊಂದರೆ ಅನುಭವಿಸುವ ಜನರನ್ನು ರಕ್ಷಿಸುವ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ?
ಇದು ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷದ ಪ್ರಶ್ನೆ.
ಇದಕ್ಕೆ ಕೇವಲ ‘ಕಾಡು ಉಳಿಸಿ’ ಎನ್ನುವುದು ಪರಿಹಾರವಾಗುವುದಿಲ್ಲ.
‘ಮನುಷ್ಯರನ್ನು ಹೊರಗೆ ಕಳುಹಿಸಿ’ ಎನ್ನುವುದೂ ಪರಿಹಾರವಾಗುವುದಿಲ್ಲ.
ಮನುಷ್ಯ, ಕಾಡು ಮತ್ತು ಕಾಡುಪ್ರಾಣಿಗಳ ನಡುವೆ ಹೊಸ ಸಮತೋಲನ ಹೇಗೆ ನಿರ್ಮಿಸಬೇಕು ಎಂಬುದೇ ಮುಖ್ಯ ಪ್ರಶ್ನೆ.
ಇಲ್ಲಿ ಮತ್ತೊಂದು ವಾಸ್ತವವನ್ನು ಒಪ್ಪಿಕೊಳ್ಳಬೇಕು.
ಪಶ್ಚಿಮ ಘಟ್ಟದಲ್ಲಿ ಉಳಿದಿರುವ ಅನೇಕ ಕುಟುಂಬಗಳು ಅಲ್ಲೇ ಉಳಿಯಲು ಬಯಸುವುದಕ್ಕಿಂತ, ಪರ್ಯಾಯವಿಲ್ಲದ ಕಾರಣ ಅಲ್ಲೇ ಉಳಿದಿವೆ.
ಇಂದು ಸರ್ಕಾರ ಸುರಕ್ಷಿತ ಪ್ರದೇಶದಲ್ಲಿ ಉತ್ತಮ ವಸತಿ, ಕೃಷಿಗೆ ಅವಕಾಶ, ಜೀವನೋಪಾಯದ ಪರ್ಯಾಯ ಮತ್ತು ಮೂಲಸೌಕರ್ಯ ಕಲ್ಪಿಸಿ,
“ಬನ್ನಿ, ಇಲ್ಲಿಗೆ ಬನ್ನಿ. ಇಲ್ಲಿ ಕಾಡುಪ್ರಾಣಿಗಳ ಕಾಟ ಕಡಿಮೆ. ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗದ ಅವಕಾಶಗಳಿವೆ”
ಎಂದು ನಂಬಿಕೆಯಿಂದ ಹೇಳಿದರೆ ಎಷ್ಟು ಕುಟುಂಬಗಳು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತವೆ?
ಈ ಪ್ರಶ್ನೆಯನ್ನೂ ನಾವು ಕೇಳಬೇಕು.
ಏಕೆಂದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನು ಹೆದರಿಸುವುದಕ್ಕಿಂತ, ಅವರಿಗೆ ಗೌರವಯುತವಾದ ಪರ್ಯಾಯ ಬದುಕನ್ನು ಒದಗಿಸುವುದು ಹೆಚ್ಚು ಮಾನವೀಯ ಮಾರ್ಗ.
ಹೀಗಾಗಿ ಇಂದು ಚರ್ಚೆಯ ದಿಕ್ಕನ್ನೇ ಸ್ವಲ್ಪ ಬದಲಿಸಬೇಕಾದ ಅಗತ್ಯವಿದೆ.
“ಪಶ್ಚಿಮ ಘಟ್ಟವನ್ನು ಜನರಿಂದ ಹೇಗೆ ರಕ್ಷಿಸಬೇಕು?”
ಎಂಬ ಪ್ರಶ್ನೆಯ ಜೊತೆಗೆ,
“ಪಶ್ಚಿಮ ಘಟ್ಟದಲ್ಲಿರುವ ಜನರನ್ನು ಪಶ್ಚಿಮ ಘಟ್ಟದ ಬದಲಾಗುತ್ತಿರುವ ಪರಿಸ್ಥಿತಿಯಿಂದ ಹೇಗೆ ರಕ್ಷಿಸಬೇಕು?”
ಎಂಬ ಪ್ರಶ್ನೆಯೂ ಇರಬೇಕು.
ಮಾಧವ ಗಾಡ್ಗೀಳ್ ವರದಿ ಇರಲಿ.
ಕಸ್ತೂರಿ ರಂಗನ್ ವರದಿ ಇರಲಿ.
ಪರಿಸರ ಸೂಕ್ಷ್ಮ ವಲಯದ ಚರ್ಚೆ ಇರಲಿ.
ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಂಘರ್ಷದ ಚರ್ಚೆ ಇರಲಿ.
ಇವೆಲ್ಲವೂ ಅಗತ್ಯವೇ.
ಆದರೆ ವರದಿಗಳು ಸಿದ್ಧವಾದ ಕಾಲದ ಪಶ್ಚಿಮ ಘಟ್ಟ ಮತ್ತು ಇಂದಿನ ಪಶ್ಚಿಮ ಘಟ್ಟ ಒಂದೇ ಅಲ್ಲ.
ಜನಸಂಖ್ಯೆಯ ವಯೋವಿನ್ಯಾಸ ಬದಲಾಗಿದೆ.
ಉದ್ಯೋಗದ ಮಾದರಿ ಬದಲಾಗಿದೆ.
ಕೃಷಿಯ ಸ್ವರೂಪ ಬದಲಾಗಿದೆ.
ಜೀವನಶೈಲಿ ಬದಲಾಗಿದೆ.
ಕಾಡಿನೊಂದಿಗೆ ಮನುಷ್ಯನ ಸಂಬಂಧ ಬದಲಾಗಿದೆ.
ಕಾಡುಪ್ರಾಣಿಗಳೊಂದಿಗೆ ಸಂಘರ್ಷದ ಸ್ವರೂಪವೂ ಬದಲಾಗಿದೆ.
ಹೀಗಿರುವಾಗ 15–16 ವರ್ಷಗಳ ಹಿಂದಿನ ವರದಿಗಳನ್ನು ಇಂದಿನ ವಾಸ್ತವಕ್ಕೆ ಹಾಗೆಯೇ ಅನ್ವಯಿಸುವ ಬದಲು, ಹೊಸ ವಾಸ್ತವವನ್ನು ಆಧರಿಸಿ ಹೊಸ ಅಧ್ಯಯನ ಅಗತ್ಯವಿಲ್ಲವೇ?
ಒಂದೆಡೆ ವಿಧಾನಮಂಡಲದಲ್ಲಿ ಪಶ್ಚಿಮ ಘಟ್ಟದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.
ವಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸುತ್ತವೆ.
ಸರ್ಕಾರ ತನ್ನ ಉತ್ತರ ನೀಡುತ್ತದೆ.
ಅಧಿಕಾರಿಗಳ ಮಟ್ಟದಲ್ಲಿ ಕಡತಗಳು ಓಡಾಡುತ್ತವೆ.
ಪರಿಸರ ತಜ್ಞರು ವರದಿಗಳನ್ನು ಉಲ್ಲೇಖಿಸುತ್ತಾರೆ.
ಚಿಂತಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.
ಪರಿಸರ ಪ್ರೇಮಿಗಳು ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳುತ್ತಾರೆ.
ಅದೇ ಸಮಯದಲ್ಲಿ…
ಪಶ್ಚಿಮ ಘಟ್ಟದ ಯಾವುದೋ ಒಂದು ಹಳ್ಳಿಯಲ್ಲಿ ಒಬ್ಬ ಅಜ್ಜ ಮನೆಯ ಅಂಗಳದಲ್ಲಿ ಕುಳಿತು ತನ್ನ ಹೆಂಡತಿಗೆ,
“ಇವತ್ತು ಎಷ್ಟು ಹಂದಿ ಬಂದಿದ್ದವು ಗೊತ್ತಾ?”
ಎಂದು ದಿನದ ವರದಿ ಒಪ್ಪಿಸುತ್ತಿರುತ್ತಾನೆ.
ಇನ್ನೊಂದು ಮನೆಯಲ್ಲಿ ಇಬ್ಬರು ವೃದ್ಧರು ಗಂಟೆ, ಜಾಗಟೆ ಹಿಡಿದು,
“ಹೂ… ಹೋ… ಹೋ…”
ಎಂದು ಕೂಗುತ್ತಾ ಮಂಗಗಳನ್ನು ಓಡಿಸುತ್ತಿರುತ್ತಾರೆ.
ಮಂಗ ಸ್ವಲ್ಪ ಹೊತ್ತು ಅವರನ್ನು ನೋಡುತ್ತದೆ.
“ಇವನ…”
ಎಂಬಂತೆ ಮುಖ ಮಾಡುತ್ತದೆ.
ಮತ್ತೆ ತನ್ನ ಕೆಲಸ ಮುಂದುವರಿಸುತ್ತದೆ!
ಸದನದಲ್ಲಿ ಪಶ್ಚಿಮ ಘಟ್ಟದ ಬಗ್ಗೆ ಕೋಲಾಹಲ ಮುಂದುವರಿಯುತ್ತದೆ.
ಹಳ್ಳಿಯಲ್ಲಿ ಮಂಗಗಳ ಕೋಲಾಹಲ ಮುಂದುವರಿಯುತ್ತದೆ.
ಎರಡೂ ಕಡೆ ಚರ್ಚೆ ನಡೆಯುತ್ತಲೇ ಇರುತ್ತದೆ.
ಆದರೆ ಈ ಎರಡರ ನಡುವಿನ ಅಂತರವನ್ನು ತುಂಬುವ ಕೆಲಸ ಇನ್ನೂ ಬಾಕಿಯಿದೆ.
ಇಂದು ಪಶ್ಚಿಮ ಘಟ್ಟಕ್ಕೆ ಬೇಕಾಗಿರುವುದು ಕೇವಲ ಮತ್ತೊಂದು ವರದಿ ಅಲ್ಲ.
ಬದಲಾಗಿರುವ ಪಶ್ಚಿಮ ಘಟ್ಟದ ಹೊಸ ವಾಸ್ತವದ ಅಧ್ಯಯನ.
ಅಲ್ಲಿನ ಜನರ ವಯಸ್ಸು, ವಲಸೆ, ಕೃಷಿ, ಆದಾಯ, ಕಾಡುಪ್ರಾಣಿಗಳ ಹಾವಳಿ, ಪರಿಹಾರ ವ್ಯವಸ್ಥೆ, ಪರ್ಯಾಯ ಜೀವನೋಪಾಯ, ಸ್ವಯಂಪ್ರೇರಿತ ಪುನರ್ವಸತಿ ಸಾಧ್ಯತೆ—ಇವೆಲ್ಲವನ್ನೂ ಒಟ್ಟಾಗಿ ನೋಡುವ ಹೊಸ ದೃಷ್ಟಿಕೋನ.
ಯಾಕೆಂದರೆ,
ಪಶ್ಚಿಮ ಘಟ್ಟವನ್ನು ಉಳಿಸುವುದು ಎಂದರೆ ಕೇವಲ ಕಾಡನ್ನು ಉಳಿಸುವುದಲ್ಲ.
ಅಲ್ಲಿ ಉಳಿದಿರುವ ಮನುಷ್ಯನ ಬದುಕನ್ನೂ ಅರ್ಥಮಾಡಿಕೊಳ್ಳುವುದು.
ಅದೇ ರೀತಿ,
ಪಶ್ಚಿಮ ಘಟ್ಟದ ಜನರನ್ನು ಉಳಿಸುವುದು ಎಂದರೆ ಕಾಡನ್ನು ನಾಶಮಾಡಲು ಅವರಿಗೆ ಸ್ವಾತಂತ್ರ್ಯ ಕೊಡುವುದೂ ಅಲ್ಲ.
ಮನುಷ್ಯ ಮತ್ತು ಪ್ರಕೃತಿಯ ನಡುವೆ ಹೊಸ ಸಮತೋಲನ ಕಂಡುಕೊಳ್ಳುವುದು.
ಇಂದು ಬಹುಶಃ ಕಾಲವೇ ನಮಗೆ ಒಂದು ವಿಚಿತ್ರ ಪಾಠ ಕಲಿಸುತ್ತಿದೆ:
ಒಂದು ಕಾಲದಲ್ಲಿ ಮನುಷ್ಯನಿಂದ ಪಶ್ಚಿಮ ಘಟ್ಟವನ್ನು ರಕ್ಷಿಸಬೇಕಿತ್ತು.
ಇಂದು ಪಶ್ಚಿಮ ಘಟ್ಟದಲ್ಲಿರುವ ಮನುಷ್ಯನನ್ನೂ ಪಶ್ಚಿಮ ಘಟ್ಟದಿಂದ ರಕ್ಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ!
ಈ ಬದಲಾದ ವಾಸ್ತವವನ್ನು ಅರ್ಥಮಾಡಿಕೊಳ್ಳದೆ, ಹಳೆಯ ವರದಿಗಳನ್ನೇ ಹಿಡಿದುಕೊಂಡು ಹೊಸ ಕಾಲದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಎಷ್ಟು ಸಮಂಜಸ?
ಈ ಪ್ರಶ್ನೆಗೆ ಉತ್ತರ ಹುಡುಕುವ ಸಮಯ ಈಗ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



