*ಮಂಗಳೂರು ಎಂದು ಹೆಸರು ಬದಲಾವಣೆ; ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: “ಕರಾವಳಿ ಮತ್ತು ಮಲೆನಾಡಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು, ಬ್ಯಾಂಕ್ ಸಾಲ ತೀರುವಳಿ ಅವಧಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ತುಳುನಾಡ ಜವನೆರ್ ಸಂಘಟನೆ ಬೆಂಗಳೂರಿನ ವಿಜಯನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಸ್ಟಮಿದ ಐಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಮೂಲಸೌಕರ್ಯಗಳ ನಿರ್ವಹಣೆ ವೆಚ್ಚವೂ ಸಹಜವಾಗಿಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆದಾರರಿಗೆ ನೆರವು ನೀಡುವ ಉದ್ದೇಶದಿಂದ ಬ್ಯಾಂಕು ಸಾಲ ತೀರುವಳಿ ಅವಧಿಯನ್ನು ಹೆಚ್ಚಿಸಲಾಗುವುದು” ಎಂದು ಹೇಳಿದರು.
“ದಕ್ಷಿಣ ಕನ್ನಡ ಜಿಲ್ಲೆ ಜ್ಞಾನ, ಉತ್ತಮವಾದ ಪರಿಸರ, ವಿಶಾಲವಾದ ಕಡಲ ತೀರವನ್ನು ಹೊಂದಿದ್ದು, ವ್ಯಾಪಾರ ವಹಿವಾಟು, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಂತಹ ಪವಿತ್ರವಾದ ನೆಲವನ್ನು ಉಳಿಸಿ ಅದನ್ನು ಅಭಿವೃದ್ಧಿಪಡಿಸುವ ಆರ್ಕಿಟೆಕ್ಟ್ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸರ್ಕಾರ ನಿಮ್ಮ ಜತೆಯಲ್ಲಿಯೇ ಇದೆ. ನನಗೆ ರಾಜಕಾರಣ ಮುಖ್ಯವಲ್ಲ. ಉಪಕಾರ ಸ್ಮರಣೆ ನಿಮಗೆ ಬಿಟ್ಟು ಬಿಡುತ್ತೇನೆ. ನನಗೆ ಅದರ ಅವಶ್ಯಕತೆಯಿಲ್ಲ” ಎಂದರು.
“ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಿ ಹಲವಾರು ಐತಿಹಾಸಿಕ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಸಚಿವ ಸಂಪುಟದ ಎಲ್ಲಾ ತೀರ್ಮಾನಗಳಿಗೆ ಈಗಾಗಲೇ ಸಹಿ ಮಾಡಿದ್ದು, ಸಧ್ಯದಲ್ಲಿಯೇ ಈ ಎಲ್ಲಾ ತೀರ್ಮಾನಗಳ ಸರ್ಕಾರಿ ಆದೇಶ ಹೊರಡಿಸಿ ಎಲ್ಲಾ ಘೋಷಣೆಗಳನ್ನು ಜಾರಿಗೊಳಿಸಲಾಗುವುದು” ಎಂದು ಹೇಳಿದರು.
ಹೊಸ ಪ್ರವಾಸೋದ್ಯಮ ನೀತಿ
ಮೂರು ಜಿಲ್ಲೆಗಳನ್ನು ವ್ಯಾಪಿಸಿರುವ ನಮ್ಮ ಕರಾವಳಿ ತೀರ 320 ಕಿಮೀ ವಿಸ್ತಾರವಾಗಿದ್ದು, ಪಕ್ಕದಲ್ಲಿಯೇ ಇರುವ ಮಲೆನಾಡ ಜಿಲ್ಲೆಗಳು ಸಹ ಸಂಪತ್ಭರಿತವಾಗಿವೆ. ಈ ಜಿಲ್ಲೆಗಳಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಹೊಸ ಪ್ರವಾಸೋದ್ಯಮ ನೀತಿಗೆ ಅನುಮೋದನೆ ನೀಡಿದ್ದೇವೆ. ಈ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವವರ ಹಿತವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಂದುಗೂಡಿಸಿ ಸಧ್ಯದಲ್ಲಿಯೇ ಸಮಾಲೋಚನಾ ಸಭೆಯನ್ನು ನಡೆಸಲಾಗುವುದು” ಎಂದು ತಿಳಿಸಿದರು.
“ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳಿವೆ. ಕೇರಳ ಮಾದರಿಯಲ್ಲಿ ವಾಟರ್ ಮೆಟ್ರೋ ಸೌಲಭ್ಯ ಆರಂಭಿಸಲು ಅನುಮೋದನೆ ನೀಡಿದ್ದೇವೆ. ಇನ್ನು ಮುಂದೆ ಬಸ್ನಲ್ಲಿ ಸಂಚರಿಸುವ ರೀತಿಯಲ್ಲೇ, ವಾಟರ್ ಮೆಟ್ರೋದಲ್ಲಿಯೂ ಸಂಚರಿಸಬಹುದಾಗಿದೆ. ಇದಕ್ಕೆ ಪೂರಕವಾಗಿ ಬಂದರುಗಳ ನಿರ್ಮಾಣಕ್ಕೆ ಈಗಾಗಲೇ ನಾನು ಆದೇಶ ನೀಡಿದ್ದೇನೆ. ಟೀಕೆಗಳೆಲ್ಲಾ ಸಾಯುತ್ತವೆ, ಮಾಡಿದ ಕೆಲಸ ಮಾತ್ರ ಉಳಿಯುತ್ತದೆ. ಈ ತತ್ವದಲ್ಲಿ ಮಾತ್ರ ನನಗೆ ನಂಬಿಕೆಯಿದೆ” ಎಂದರು.
ಕನ್ನಡ ಮಾತೃಭಾಷೆಯಾದರೆ, ತುಳು ಅದರ ಮಗಳು
“ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ತುಳು ಉಳಿದರೆ ತುಳುನಾಡಿನ ಪರಂಪರೆ ಉಳಿಯಲು ಸಾಧ್ಯ. ನಮ್ಮ ಪರಂಪರೆ ಬಗ್ಗೆ ನಾವು ಹೆಮ್ಮೆಪಡಬೇಕು. ತುಳುನಾಡಿನ ಪರಂಪರೆ ಅನನ್ಯವಾದುದು. ಇಲ್ಲಿ ಯಕ್ಷಗಾನದ ಹಜ್ಜೆಯ ನಾದವನ್ನು ಕೇಳುತ್ತೇವೆ, ಕಂಬಳದ ವೀರಾವೇಶವನ್ನು ನಾವು ನೋಡಿದ್ದೇವೆ. ಯಾರಿಗೆ ಎಷ್ಟೇ ಕಷ್ಟವಾಗಲಿ, ಕೊನೆಗೆ ಎಲ್ಲರೂ ಕರಾವಳಿಯ ದೇವಸ್ಥಾನಗಳಿಗೆ ಹೋಗಿ ತಮ್ಮ ನೋವು, ದುಃಖ ದುಮ್ಮಾನ ಹೇಳಿಕೊಳ್ಳುತ್ತಾರೆ. ಅಂತಹ ಪವಿತ್ರ ಭೂಮಿಯನ್ನು ಅಭಿವೃದ್ಧಿ ಪಡಿಸುವ ಮೂಲಕ ಆರ್ಥಿಕವಾಗಿ ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
“ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು, ಮೆಡಿಕಲ್ ಕಾಲೇಜುಗಳು ಇಲ್ಲಿವೆ. ಆದರೆ ಇಲ್ಲಿನ ಜನರು ಜೀವನಕ್ಕಾಗಿ ಮುಂಬಯಿ, ಸೌದಿ ಸೇರಿದಂತೆ ಹೊರ ದೇಶಗಳಿಗೆ ಹೋಗುವ ಪರಿಸ್ಥಿತಿಯಿದೆ. ಹೊರಗೆ ಹೋಗಿ ಬದುಕಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಎಲ್ಲಾ ಅವಕಾಶಗಳು ಇಲ್ಲಿಯೇ ಲಭ್ಯವಿದ್ದರೆ ಯಾರೂ ಹೊರಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂತಹ ಅವಕಾಶಗಳನ್ನು ಸೃಷ್ಟಿಸುವ ಕಾರ್ಯವನ್ನು ನಾವು ಆರಂಭಿಸಿದ್ದೇವೆ” ಎಂದರು.
“ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ. ಹುಟ್ಟಿದ ಸೂರ್ಯ ಮುಳುಗಲೇ ಬೇಕು. ಆದರೆ ಮುಳುಗಿದ ಸೂರ್ಯ ಮತ್ತೆ ಹುಟ್ಟುತ್ತಾನೆ. ಮತ್ತೆ ಏಳಲೇಬೇಕು. ದೇವರು ವರನೂ ಕೊಡುವುದಿಲ್ಲ, ಶಾಪನೂ ಕೊಡುವುದಿಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಟೀಕೆ ತಪ್ಪಲ್ಲ, ಅದನ್ನು ಆರೋಗ್ಯಕರವಾಗಿ ಸ್ವೀಕರಿಸುತ್ತೇನೆ” ಎಂದರು.
ಮಂಗಳೂರು ಎಂದು ಹೆಸರು ಬದಲಾವಣೆ
“ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸುವ ಕುರಿತಾಗಿ ಈಗಾಗಲೇ ಹಲವು ಶಾಸಕರು, ಸಂಸದರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಾಗಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸರ್ಕಾರ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ” ಎಂದರು.
“ಸಾಹಿತಿಗಳು, ಗಣ್ಯರು, ರಾಜಕಾರಣಿಗಳು ಮಾತ್ರವಲ್ಲದೆ ಜನಸಾಮಾನ್ಯರೂ ಸಹ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಯಾವುದೇ ವೇದಿಕೆಯಲ್ಲಿ ವ್ಯಕ್ತಪಡಿಸಬಹುದು. ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.
“ನಿಮ್ಮ ಬೇರನ್ನು ಮರೆತರೆ ಫಲ ಕೊಯ್ಯಲು ಸಾಧ್ಯವಿಲ್ಲ. ತುಳು ಕರಾವಳಿಯ ಜೀವನಾಡಿ, ಬೇರನ್ನು ಗಟ್ಟಿಯಾಗಿ ಕಾಪಾಡಿ. ತುಳುನಾಡು ಬೆಳೆಯಲಿ. ತಾಯಿ ಮಗುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ. ಗಟ್ಟಿಯಾದ ಬದುಕನ್ನು ಒಟ್ಟಾಗಿ ಕಟ್ಟೋಣ” ಎಂದು ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




