CrimeKannada NewsKarnataka NewsLatestNational

*2 ಕೋಟಿ ವಿಮೆಗಾಗಿ ಪತಿಯ ಊಟದಲ್ಲೇ ವಿಷ*: *ಮಗನನ್ನೂ ಬಿಡದ ಪತ್ನಿಯ ಭೀಕರ ಸಂಚು ಬಯಲು*

ಪ್ರಗತಿವಾಹಿನಿ ಸುದ್ದಿ: ಹಣ ಮತ್ತು ಆಸ್ತಿಯ ಮೇಲಿನ ದುರಾಸೆ ಮನುಷ್ಯನನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಮತ್ತು ವಿಮೆ ಹಣದ ಆಸೆಗೆ ಪತ್ನಿಯೇ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಸ್ವಂತ ಮಗ ಮತ್ತು ಸೋದರಳಿಯನಿಗೂ ವಿಷ ನೀಡಿರುವ ಶಂಕೆ ವ್ಯಕ್ತವಾಗಿದೆ. ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಕುಟುಂಬದ ಸದಸ್ಯರ ವೈದ್ಯಕೀಯ ಪರೀಕ್ಷೆಯಲ್ಲಿ ಕೊನೆಗೂ ಭಯಾನಕ ಸತ್ಯ ಬಯಲಾಗಿದೆ.

ಗಾಜಿಯಾಬಾದ್‌ನ ವಸುಂಧರಾ ನಿವಾಸಿ ಸುಶೀಲ್ ಕುಮಾರ್ ಭಟ್ನಾಗರ್ ಯಶಸ್ವಿ ಟ್ರಾವೆಲ್ ಏಜೆನ್ಸಿ ಉದ್ಯಮ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸುಶೀಲ್, ಅವರ ಮಗ ಮತ್ತು ಸೋದರಳಿಯ ಪದೇಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಆರೋಗ್ಯದಲ್ಲಿ ಹಠಾತ್ ಏರುಪೇರು ಕಾಣಿಸಿಕೊಂಡಿದ್ದರಿಂದ ಅನುಮಾನಗೊಂಡ ಸುಶೀಲ್ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದರು.

ಈ ವೇಳೆ ಅವರ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಸೀಸ ಅಂಶ ಇರುವುದು ಪತ್ತೆಯಾಗಿದೆ. ಇದರಿಂದ ತಮಗೆ ನಿಧಾನವಾಗಿ ವಿಷ ನೀಡಲಾಗುತ್ತಿದೆ ಎಂಬ ಅನುಮಾನ ಸುಶೀಲ್ ಅವರಿಗೆ ಬಂದಿದೆ. ಬಳಿಕ ಸೆಪ್ಟೆಂಬರ್ 24ರಂದು ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ನವೆಂಬರ್ 23ರಂದು ಸುಶೀಲ್ ಅವರ ಪತ್ನಿ ರೇಣು ಭಟ್ನಾಗರ್ ಅವರನ್ನು ಬಂಧಿಸಿದ್ದಾರೆ. ಪತಿ, ಮಗ ಮತ್ತು ಸೋದರಳಿಯನನ್ನು ಕೊಲ್ಲಲು ಸಂಚು ರೂಪಿಸಿರೋದು ಗೊತ್ತಾಗಿದೆ.

6 ಕೋಟಿ ಉದ್ಯಮ, 2 ಕೋಟಿ ವಿಮೆ ಮೇಲೆ ಕಣ್ಣು!

ಪೊಲೀಸರ ವಿಚಾರಣೆ ವೇಳೆ ರೇಣು ತನ್ನ ಪತಿಯ ಊಟದಲ್ಲಿ ಸೀಸ ಬೆರೆಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾಳೆ. ತನ್ನ ಪತಿ 5ರಿಂದ 6 ಕೋಟಿ ರೂಪಾಯಿ ಮೌಲ್ಯದ ಟ್ರಾವೆಲ್ ಏಜೆನ್ಸಿ ಉದ್ಯಮ ಹೊಂದಿದ್ದಾರೆ. ಜೊತೆಗೆ 2 ಕೋಟಿ ರೂಪಾಯಿ ಜೀವ ವಿಮೆ ಪಾಲಿಸಿಯಿದ್ದು, ಅದಕ್ಕೆ ತಾನೇ ಏಕೈಕ ನಾಮಿನಿ ಎಂದು ಆಕೆ ಹೇಳಿದ್ದಾಳೆ ಎನ್ನಲಾಗಿದೆ.

ಪತಿ ಮೃತಪಟ್ಟರೆ ಉದ್ಯಮದ ಆಸ್ತಿ ಮತ್ತು ವಿಮೆ ಹಣ ತನಗೆ ಸಿಗುತ್ತದೆ ಎಂಬ ದುರಾಸೆಯಿಂದ ಈ ಕೃತ್ಯಕ್ಕೆ ಮುಂದಾಗಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಚಿನಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿಗಾಗಿ ಸ್ವಂತ ಕುಟುಂಬದವರಿಗೇ ವಿಷ ನೀಡಿದ ಆರೋಪದ ಈ ಪ್ರಕರಣ ಗಾಜಿಯಾಬಾದ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Related Articles

Back to top button