*ಬೆಳಗಾವಿಯಲ್ಲಿ ಸಕ್ಕರೆ ಕಾರ್ಮಿಕರ ಬೃಹತ್ ರ‍್ಯಾಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಕ್ಕರೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಯುನೈಟೆಡ್ ಶುಗರ್ ವರ್ಕರ್ಸ್ ಫೆಡರೇಷನ್ (KUSWF) ವತಿಯಿಂದ ಬೆಳಗಾವಿಯಲ್ಲಿ ಬೃಹತ್ ರ‍್ಯಾಲಿ ಹಾಗೂ ಸಮಾವೇಶ ನಡೆಯಿತು.
ಸಮಾವೇಶಕ್ಕೂ ಮುನ್ನ ನಗರದ ಸರ್ದಾರ್ ಮೈದಾನದಿಂದ ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಿ, ಬಳಿಕ ನಗರದ ಇಂಜಿನಿಯರ್ಸ್ ಇನ್‌ಸ್ಟಿಟ್ಯೂಟ್ ಸಭಾಂಗಣದಲ್ಲಿ ಸಮಾವೇಶ ನಡೆಸಿದರು. ಕಾರ್ಮಿಕರ ಬಗ್ಗೆ ಸರ್ಕಾರ ಅನುಸರಿಸುತ್ತಿರುವ ಧೋರಣೆಯನ್ನು ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆದರು.
ಸಕ್ಕರೆ ಉದ್ಯಮಿಗಳಿಗೆ ಸರ್ಕಾರಗಳು ಸಾಲ ಮನ್ನಾ, ಸಹಾಯಧನ ಹಾಗೂ ವಿವಿಧ ರೀತಿಯ ಪ್ರೋತ್ಸಾಹ ನೀಡುತ್ತಿವೆ. ಆದರೆ ಸಕ್ಕರೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದರು.
ಸಕ್ಕರೆ ಉದ್ಯಮದಲ್ಲಿ 7ನೇ ತ್ರಿಪಕ್ಷೀಯ ವೇತನ ಮಂಡಳಿ ಆದೇಶವನ್ನು ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಜಾರಿಗೊಳಿಸಬೇಕು. ಕೆಲ ಕಾರ್ಖಾನೆಗಳಲ್ಲಿ ಬಾಕಿ ಇರುವ ವೇತನವನ್ನು ಹಿಂಬಾಕಿ ಸಹಿತ ಪಾವತಿಸಬೇಕು ಎಂದು ಒತ್ತಾಯಿಸಿದರು.
ಇದರ ಜೊತೆಗೆ ರಾಜ್ಯಾದ್ಯಂತ ಮುಚ್ಚಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಿ ಮತ್ತೆ ಕಾರ್ಯಾರಂಭ ಮಾಡುವಂತೆ ಆಗ್ರಹಿಸಿದರು. ಸಕ್ಕರೆ ಕಾರ್ಮಿಕರ ನಾಲ್ಕೈದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಗಮನ ಸೆಳೆಯಲು ಈ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



