*ತವರಿಗೆ ಹೋದ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಪತಿ*

ಪ್ರಗತಿವಾಹಿನಿ ಸುದ್ದಿ: ತವರು ಮನೆಗೆ ಹೋಗಿದ್ದ ಪತ್ನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ಪತಿ ಮಹಾಶಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಈ ಘಟನೆ ನಡೆದಿದೆ. ಬೆಳಗಿಹಳ್ಳಿ ಗ್ರಾಮದ ದೊರೆ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪತ್ನಿ 15 ದಿನಗಳ ಹಿಂದೆ ಮನೆ ಬಿಟ್ಟು ತವರು ಮನೆ ಸೇರಿದ್ದಳಂತೆ.
ಇದೇ ಕಾರಣಕ್ಕೆ ಪತಿ ದೊರೆ ಪತ್ನಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾನೆ. ಪತ್ನಿಗೆ ಪರಪುರುಷನ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾನೆ. ಈ ವಿಚಾರ ಆಕೆಯ ಪೋಷಕರಿಗೆ ತಿಳಿದಿದ್ದರೂ ಮಗಳ ಪರವಾಗಿ ಮಾತನಾಡುತ್ತಿದ್ದಾರೆ. ನಾನು ಪ್ರೀತಿಯಿಂದ ನೋಡಿಕೊಳ್ಳುತ್ತಿದೆ. ಆದರೂ ಆಕೆ ನನಗೆ ದ್ರೋಹ ಬಗೆದಿದ್ದಾಳೆ. ನನ್ನ ಮೇಲೆ ಮಾಟ-ಮಂತ್ರ ಮಾಡಿಸಿದ್ದಾಳೆ ಎಂದು ಆರೋಪಿಸಿ ವಿಡಿಯೋ ಮಾಡಿಟ್ಟಿದ್ದಾನೆ.
ಅಲ್ಲದೇ ಪೊಲೀಸರು ವಿಡಿಯೋ ಸಾಕ್ಷ್ಯದ ಆಧಾರದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಾನು ಕರ್ನಾಟಕ ಪೊಲೀಸ್ಗೆ ಹೇಳ್ತಾ ಇದ್ದೀನಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಅವಳ ಫೋನ್ ರೆಕಾರ್ಡಿಂಗ್ ತಗೊಳಿ, ಅವಳನ್ನ ಮಾತ್ರ ಬಿಡ್ಬೇಡಿ. ನನ್ನಂತ ಮುಗ್ಧ ಮನಸ್ಸಿನವನಿಗೆ ಮೋಸ ಮಾಡಿದ್ದಾಳೆ ಎಂದು ಹೇಳಿದ್ದು, ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




