*ಬೆಳಗಾವಿ ಪಾಲಿಕೆ ‘ಸೂಪರ್ ಸೀಡ್’ ಸನ್ನಿಹಿತ?*

ಬೆಳಗಾವಿ ಪಾಲಿಕೆಗೆ ‘ಸೂಪರ್ ಸೀಡ್’ ಶಿಫಾರಸಿಗೆ ವೇಗ
3 ದಿನದಲ್ಲಿ ವಾಸ್ತವ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಮೂರು ತಿಂಗಳಿಂದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯದೆ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯನ್ನು ‘ಸೂಪರ್ ಸೀಡ್’ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ.
ಕನ್ನಡ ಸಂಘಟನೆಗಳ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು, ಪಾಲಿಕೆ ಆಯುಕ್ತರಿಂದ ಮೂರು ದಿನಗಳೊಳಗೆ ಸಮಗ್ರ ವಾಸ್ತವ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದ ನಿಯೋಗ ಆ.12ರಂದು ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಿ ಪಾಲಿಕೆಯ ಆಡಳಿತಾತ್ಮಕ ಪರಿಸ್ಥಿತಿ ಕುರಿತು ಮನವಿ ಸಲ್ಲಿಸಿತ್ತು.
ಮೂರು ಪ್ರಮುಖ ಆರೋಪ
ಕಳೆದ ಮೂರು ತಿಂಗಳಿಂದ ಪಾಲಿಕೆಯ ಮಾಸಿಕ ಸಭೆಗಳು ನಡೆಯದ ಕಾರಣ ನೂರಾರು ಅಭಿವೃದ್ಧಿ ವಿಷಯಗಳು ಬಾಕಿ ಉಳಿದಿವೆ ಎಂದು ಸಂಘಟನೆಗಳು ಮನವಿಯಲ್ಲಿ ಆರೋಪಿಸಿದ್ದವು.
ಪಾಲಿಕೆಯ ಆಡಳಿತ ಪಕ್ಷ ರಾಜ್ಯ ಸರ್ಕಾರದೊಂದಿಗೆ ಸಂಘರ್ಷದ ನಿಲುವು ತಳೆದಿರುವುದರಿಂದ ಅನುದಾನ ಬಿಡುಗಡೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಿದೆ. ಇದರಿಂದ ನಗರದ 58 ವಾರ್ಡ್‌ಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಇದಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುಪಳಿಯನ್ನು ಅಂಗೀಕರಿಸುವ ವಿಷಯದಲ್ಲಿಯೂ ಹಿಂದೇಟು ಹಾಕಲಾಗುತ್ತಿದೆ ಎಂದು ಕನ್ನಡ ಸಂಘಟನೆಗಳು ಆರೋಪಿಸಿದ್ದವು. ಕನ್ನಡಿಗರ ತೆರಿಗೆ ಹಣ ಪಡೆಯುವ ಪಾಲಿಕೆಯಲ್ಲಿ, ಕನ್ನಡಕ್ಕೆ ಮನ್ನಣೆ ನೀಡಲಾಗುತ್ತಿಲ್ಲ ಎಂಬ ಆಕ್ಷೇಪವನ್ನೂ ವ್ಯಕ್ತಪಡಿಸಲಾಗಿತ್ತು.
ಮೂರು ದಿನದಲ್ಲಿ ವರದಿ
ಈ ಮನವಿಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪಾಲಿಕೆ ಆಯುಕ್ತರಿಗೆ ಪತ್ರ ರವಾನಿಸಲಾಗಿದೆ. ಮನವಿಯಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪ್ರಸ್ತುತ ವಾಸ್ತವ ಪರಿಸ್ಥಿತಿಯ ಸಮಗ್ರ ವರದಿಯನ್ನು ಮೂರು ದಿನಗಳೊಳಗೆ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಪಾಲಿಕೆ ಆಯುಕ್ತರು ಸಲ್ಲಿಸುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಬೆಳಗಾವಿ ಮಹಾನಗರ ಪಾಲಿಕೆಯನ್ನು ‘ಸೂಪರ್ ಸೀಡ್’ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.
ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ
ಪಾಲಿಕೆಯ ಆಡಳಿತಾತ್ಮಕ ಬಿಕ್ಕಟ್ಟಿನಿಂದಾಗಿ ರಾಜ್ಯ ಸರ್ಕಾರದಿಂದ ಬರಬೇಕಾದ ಅನುದಾನ, ಕಾಮಗಾರಿಗಳ ಅನುಮೋದನೆ ಹಾಗೂ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ನಿರ್ಧಾರಗಳು ವಿಳಂಬವಾಗುತ್ತಿವೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಇದೀಗ ಪ್ರಾದೇಶಿಕ ಆಯುಕ್ತರು ವರದಿ ಕೇಳಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
3 ತಿಂಗಳ ನಂತರ ಮಂಗಳವಾರ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತಾದರೂ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸಲಾಗಿಲ್ಲ.




