
ಪ್ರಗತಿವಾಹಿನಿ ಸುದ್ದಿ: ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಪತ್ತೆಯಾಗಿದ್ದ ನಕಲಿ ಔಷಧ ಜಾಲ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಎಂದು ಎಸ್‌ಐಟಿ ಶಂಕಿಸಿರುವ ಪ್ರಶಾಂತ್ ರಂಜನ್ ಬಾಬು ಬಂಧನವಾಗಿದೆ.
ಅಜರ್‌ಬೈಜಾನ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ ಆಗಮಿಸಿದ ಪ್ರಶಾಂತ್ ರಂಜನ್ ಬಾಬುವನ್ನು, ಲುಕ್‌ಔಟ್ ನೋಟಿಸ್ ಆಧರಿಸಿ ವಿಮಾನ ನಿಲ್ದಾಣದ ಅರೈವಲ್ ಗೇಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ನಕಲಿ ಔಷಧ ತಯಾರಿಕೆ ಮತ್ತು ಪೂರೈಕೆ ಜಾಲ ಪತ್ತೆಯಾಗಿತ್ತು. ತನಿಖೆ ಮುಂದುವರಿದಂತೆ ಹಲವು ಆಸ್ಪತ್ರೆಗಳು ಹಾಗೂ ಮೆಡಿಕಲ್‌ಗಳಿಗೆ ನಕಲಿ ಔಷಧ ಪೂರೈಕೆಯಾಗುತ್ತಿದ್ದ ಮಾಹಿತಿ ಹೊರಬಂದಿತ್ತು.
ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್ ಜೈನ್ ನಕಲಿ ಔಷಧಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ. ಈ ಜಾಲದ ವಾರ್ಷಿಕ ವಹಿವಾಟು ಸುಮಾರು 15 ಕೋಟಿ ರೂಪಾಯಿ ಇತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಪ್ರಶಾಂತ್ ರಂಜನ್ ಬಾಬು ಅಜರ್‌ಬೈಜಾನ್‌ನಲ್ಲಿರುವುದು ಈ ಹಿಂದೆ ತನಿಖೆಯಿಂದ ಪತ್ತೆಯಾಗಿತ್ತು. ಇದೀಗ ಭಾರತಕ್ಕೆ ವಾಪಸಾದ ಬೆನ್ನಲ್ಲೇ ಲುಕ್‌ಔಟ್ ನೋಟಿಸ್ ಆಧರಿಸಿ ಬಂಧಿಸಲಾಗಿದ್ದು, ನಕಲಿ ಔಷಧ ಜಾಲದ ಹಣಕಾಸು ವ್ಯವಹಾರ, ಪೂರೈಕೆ ವ್ಯವಸ್ಥೆ ಹಾಗೂ ಇತರ ಆರೋಪಿಗಳ ಸಂಪರ್ಕದ ಕುರಿತು ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




