
ಪ್ರಗತಿವಾಹಿನಿ ಸುದ್ದಿ: ಗುವಾಹಟಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡು ಹಿಂಭಾಗದ ಭಾಗ ರನ್‌ವೇಗೆ ಬಡಿದ ಘಟನೆ ನಡೆದಿದೆ.
ಅದೃಷ್ಟವಶಾತ್ ವಿಮಾನದಲ್ಲಿದ್ದ 225 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗುವಾಹಟಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ಸಂಸ್ಥೆಯ 6E 6542 ವಿಮಾನ ಲ್ಯಾಂಡಿಂಗ್‌ಗೆ ಮುಂದಾಗಿದ್ದ ವೇಳೆ ದಿಢೀರ್ ಬೀಸಿದ ಭಾರಿ ಗಾಳಿಯಿಂದಾಗಿ ವಿಮಾನದ ಹಿಂಭಾಗ ರನ್‌ವೇಗೆ ತಾಗಿರುವುದಾಗಿ ತಿಳಿದುಬಂದಿದೆ.
ಈ ವೇಳೆ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ಗಮನಿಸಿದ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ಮತ್ತೆ ಮೇಲಕ್ಕೆತ್ತಿ ಆಕಾಶದಲ್ಲಿ ಒಂದು ಸುತ್ತು ಹಾರಿಸಿದ ಬಳಿಕ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ಘಟನೆ ಕುರಿತು ಇಂಡಿಗೋ ಸಂಸ್ಥೆ ಪ್ರತಿಕ್ರಿಯಿಸಿದ್ದು, ನಿಗದಿತ ಸುರಕ್ಷತಾ ಮಾರ್ಗಸೂಚಿಗಳಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ವಿಮಾನವನ್ನು ಸಂಪೂರ್ಣ ತಾಂತ್ರಿಕ ಹಾಗೂ ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗುವುದು.
ಅಗತ್ಯ ಪರಿಶೀಲನೆ ಪೂರ್ಣಗೊಂಡು ಸುರಕ್ಷತಾ ಅನುಮತಿ ದೊರೆತ ಬಳಿಕವಷ್ಟೇ ವಿಮಾನವನ್ನು ಮುಂದಿನ ಕಾರ್ಯಾಚರಣೆಗೆ ಬಳಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




