ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
2018ರ ಕೊನೆಯ ದಿನ ರಾತ್ರಿ ಅಲಾರವಾಡ ಬಳಿ ನಡೆದ ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಮಳಮಾರುತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಕೇವಲ 870 ರೂ. ಗಾಗಿ ಕೊಲೆ ಮಾಡಲಾಗಿದೆ ಎನ್ನುವುದು ಗೊತ್ತಾಗಿದೆ.
ಅಲಾರವಾಡ ಬತ್ತದ ಗದ್ದೆಯಲ್ಲಿ ಅನಾಮಧೇಯ ವ್ಯಕ್ತಿಯ ಶವ ಬಿದ್ದಿದ್ದನ್ನು ತಿಳಿದ ಪೊಲೀಸರು ತನಿಖೆ ಆರಂಭಿಸಿದಾಗ ಅದು ಹಲಗಾದ ಉಮೇಶ ಅಪ್ಪಯ್ಯ ಕುಂಡೇಕರ್ (44) ಎನ್ನುವವರದ್ದು ಎನ್ನುವುದು ಪತ್ತೆಯಾಗಿತ್ತು. ನಂತರ ವಡಗಾವಿ ಅನಗೋಳ ರಸ್ತೆಯ ಗುರುಪ್ರಸಾದ ಮಹಾದೇವ ಶೆಟ್ಟಿ (21) ಮತ್ತು ಶಹಾಪುರದ ಪ್ರವೀಣ ಗುರುಪುತ್ರ ಚಿಂದಿ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸಾರಾಯಿ ಕುಡಿದು ಹಣಕ್ಕಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹಣ ದೋಚುವ ಉದ್ದೇಶದಿಂದ ಗ್ಲಾಸ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಗಿ ಆರೋಪಿಗಳಿ ತಿಳಿಸಿದ್ದು, ಅವರಿಂದ ಮೊಬೈಲ್ ಮತ್ತು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಕಮಿಶನರ್ ಡಿ.ಸಿ.ರಾಜಪ್ಪ, ಡಿಸಿಪಿಗಳಾದ ಸೀಮಾ ಲಾಟ್ಕರ್ ಮತ್ತು ಮಹಾನಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಎಸಿಪಿ ನಾರಾಯಣ ಬರಮನಿ, ಪಿಐ ಬೀ.ಆರ್.ಗಡ್ಡೆೇಕರ್ ನೇತೃತ್ವದಲ್ಲಿ ತನಿಖೆ ನಡೆಯಿತು.
ಯಾವುದೇ ಸುಳಿವು ಇಲ್ಲದ ಕೊಲೆ ಪ್ರಕರಣ ಪತ್ತೆ ಮಾಡಿದ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ