Latest

ಅಳಿವಿನ ಅಂಚಿನಲ್ಲಿ ಜಾನಪದ ಸಾಹಿತ್ಯ: ಕನಕತಾರಾ ವಿಷಾದ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಜಾನಪದ ಸಾಹಿತ್ಯ ಪ್ರಸ್ತುತ ದಿನಗಳಲ್ಲಿ ಅಳಿವಿನ ಅಂಚಿನಲ್ಲಿರುವುದು ವಿಷಾದನೀಯ ಎಂದು ಕನ್ನಡ ಜಾನಪದ ಪರಿಷತ್ತು ರಾಜ್ಯ ಸಂಚಾಲಕಿ ಹಾಗೂ ಖಜಾಂಚಿ ಡಾ. ಕನಕತಾರಾ ಹೇಳಿದರು.
ಸೋಮವಾರ ಸಂಜೆ ನಗರದ ಮಹಾಂತ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜ ಹಾಗೂ ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ-ಜಾಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಮರೆಯಾಗುವುದನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾನಪದ ಸಾಹಿತ್ಯ ಬೆಳೆಸಿ ನಮ್ಮ ಮುಂದಿನ ಯುವಜನಾಂಗಕ್ಕೆ ತಿಳಿಸಬೇಕಾಗಿದೆ ಎಂದರು.
ಜಾನಪದ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಸ್ಥಾಪನೆಯಾಗಿ ಮೂರು ವರ್ಷದಲ್ಲಿ ಅನೇಕ ಕಲಾವಿದರಿಗೆ ಬೆಳೆಯಲು ಸಹಾಯ ಮಾಡಿದೆ. ಕಡುಬಡವ ಕಲಾವಿದರನ್ನು ಗುರುತಿಸುವ ಸಲುವಾಗಿ ರಾಜ್ಯಾದ್ಯಂತ ಕಲಾವಿದರ ಸಮೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ೧೫ ಜಿಲ್ಲೆಯಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು ಇನ್ನುಳಿದ ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. ಕಲಾವಿದರಿಗೆ ೧೫ ನೂರು ಮಾತ್ರ ನೀಡುತ್ತಿದ್ದರು. ಜಾನಪದ ಪರಿಷತ್ತು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದರಿಂದ ಆಗಿನ ಸಿಎಂ ಸದಾನಂದಗೌಡ ಕಲಾವಿದರ ಮಾಸಾಶನವನ್ನು ೩ ಸಾವಿರಕ್ಕೆ ಏರಿಕೆ ಮಾಡಿದ್ದರು. ಕಲಾವಿದರು ಸಮೀಕ್ಷೆ ಮುಗಿದ ನಂತರ ಮತ್ತೆ ಸಿಎಂ ಬಳಿ ಹೋಗಿ ಸದ್ಯ ಇರುವ ಮೂರು ಸಾವಿರ ಮಾಸಾಶನವನ್ನು ೩ಸಾವಿರದಿಂದ ೫ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯ ಮಾಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಮಹಿಳೆಯರ ಲವಲವಿಕೆ ಕಂಡ ಅವರು, ಮುಂದೆ ಜಾನಪದ ಸಾಹಿತ್ಯ ಪರಿಷತ್ತು ಮಹಿಳಾ ಸಮಾವೇಶ ಬೆಳಗಾವಿಯಲ್ಲಿ ಮಾಡಲಾಗುವುದು. ಈ ಸಮಾವೇಶ ಶ್ರೇಯಸ್ಸಿಗೆ ಲಿಂಗಾಯತ ಮಹಿಳಾ ಸಮಾಜದವರು ಸಹಾಯ ಮಾಡಬೇಕೆಂದರು.
ಮುಖ್ಯ ಅತಿಥಿ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಂಜನಿ ಬೀರಗ್ಯಾಳ ಮಾತನಾಡಿ, ಬಾಯಿಂದ ಬಾಯಿಗೆ ಹರಡಿದ ಸಾಹಿತ್ಯವೇ ಜಾನಪದ ಸಾಹಿತ್ಯ. ಜಾನಪದವು ಹೆಣ್ಣುಮಕ್ಕಳಿಂದಲೇ ಹುಟ್ಟಿದ್ದು, ಆಗಿನ ಕಾಲದ ಮಹಿಳೆಯರು ತಮ್ಮ ನೋವು, ನಲಿವುಗಳನ್ನು ಹಾಡುಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಅದುವೇ ಜಾನಪದ ಸಾಹಿತ್ಯ. ಜಾನಪದ ಉಳಿಸುವುದು ಮಹಿಳೆಯರ ಜವಾಬ್ದಾರಿ. ಜಾನಪದ ಕುರಿತು ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಜಾನಪದವನ್ನು ಈಗೀನ ಯುವ ಪೀಳಿಗೆ ತಿಳಿದುಕೊಳ್ಳಲು ಸಹಾಯವಾಗುವುದು ಎಂದರು.
ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಗುಡ್ಲೂರ ಮಾತನಾಡಿದರು. 
ಕನ್ನಡ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಸಾಹಿತ್ಯವು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಕಳೆಯನ್ನು ಕಳೆದುಕೊಂಡಿಲ್ಲ. ಅದೇ ರೀತಿ ನಗರದ ಪ್ರದೇಶದಲ್ಲಿ ಜಾನಪದ ಸಾಹಿತ್ಯ ಬೆಳೆಯಬೇಕಾಗಿದೆ. ಅದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಈ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕಿ ಶೈಲಜಾ ಭಿಂಗೆ ಅವರನ್ನು ಲಿಂಗಾಯತ ಮಹಿಳಾ ಸಮಾಜ ಹಾಗೂ ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕದ ಸದಸ್ಯರು ಸನ್ಮಾನಿಸಿದರು ಹಾಗೂ ಮಹಾತ್ಮಾ ಬಸವೇಶ್ವರ ಸೌಹಾರ್ದ ಸೊಸೈಟಿಯ ಅಧ್ಯಕ್ಷೆ ಆಶಾ ಪಾಟೀಲ, ಅಜೂರ ಪ್ರಶಸ್ತಿ ಪಡೆದ ಶಾಂತಾ ಮಸೂತಿ, ನಾಡೋಜ ಪ್ರಶಸ್ತಿ ಪುರಸ್ಕೃತೆ ಉಮಾ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಲಿಂಗಾಯತ ಮಹಿಳಾ ಸಮಾಜ ಅಧ್ಯಕ್ಷೆ ಅನಿತಾ ದೇಸಾಯಿ, ಲಿಂಗಾಯತ ಮಹಿಳಾ ಸಮಾಜ ಕಾರ್ಯದರ್ಶಿ ಪ್ರತಿಭಾ ಕಳ್ಳಿಮಠ, ಕನ್ನಡ ಜಾನಪದ ಪರಿಷತ್ತು ಕಾರ್ಯದರ್ಶಿ ರಾಜೇಶ್ವರಿ ಹಿರೇಮಠ, ಮಂಗಳ ಮೆಟ್ಟಗುಡ್ಡ, ಆರತಿ ದೇಶನೂರ, ಲಿಂಗಾಯತ ಮಹಿಳಾ ಸಮಾಜದ ನೂರಾರು ಮಹಿಳೆಯರು, ಜಾನಪದ ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button