Latest

ಆಂಗ್ಲ ಮಾಧ್ಯಮ ಕುರಿತು ಭಾವಾವೇಶ ಮೀರಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಮುಕ್ತ ಚರ್ಚೆಯಾಗಬೇಕು- ಮುಖ್ಯಮಂತ್ರಿ

   

    ಪ್ರಗತಿವಾಹಿನಿ ಸುದ್ದಿ, ಧಾರವಾಡ

ದುರ್ಬಲ ವರ್ಗದ ಪೋಷಕರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಸರಕಾರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಸರಕಾರಿ ಶಾಲೆಗಳಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಭಾವಾವೇಶ ಮೀರಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಇದರ ಸಾಧಕ ಬಾಧಕಗಳ ಕುರಿತು ಎಲ್ಲ ಆಯಾಮಗಳಿಂದ ಮುಕ್ತ ಚರ್ಚೆಯಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಧಾರವಾಡದಲ್ಲಿ ಶುಕ್ರವಾರ ಆರಂಭವಾಗಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿನ ಜಗತ್ತಿನಲ್ಲಿ ವಿದ್ಯೆಯ ಪ್ರಮುಖ ಉದ್ದೇಶ ಉದ್ಯೋಗ ಪಡೆಯುವುದೇ ಆಗಿದೆ.  ಹಾಗಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೇವಲ ಬಡವರು, ಪರಿಶಿಷ್ಟ ಜಾತಿಯ ಮಕ್ಕಳು ಮಾತ್ರ ಸರಕಾರಿ ಶಾಲೆಗೆ ಹೋಗುತ್ತಿದ್ದಾರೆ. ಹಾಗಾಗಾಗಿ ಸರಕಾರ ಆಂಗ್ಲಮಾಧ್ಯಮ ಪರಿಚಯಿಸುವ ನಿರ್ಧಾರಕ್ಕೆ ಬಂದಿದೆ. ಇದಕ್ಕೆ ರಚನಾತ್ಮಕ ಸಲಹೆಗಳು ಬಂದರು ಸರಕಾರ ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧವಿದೆ ಎಂದು ಅವರು ಹೇಳಿದರು. 

ಇಂದು ಕರ್ನಾಟಕದಲ್ಲಿ ಜ್ಞಾನಾಧಾರಿತ ಮಾಹಿತಿ ತಂತ್ರಜ್ಞಾನಾಧಾರಿತ, ಜೈವಿಕ ತಂತ್ರಜ್ಞಾನಾಧಾರಿತ ಉದ್ಯಮಗಳು ಬೆಳೆಯುತ್ತಿವೆ. ಇವುಗಳಲ್ಲಿ ಆಂಗ್ಲ ಮಾಧ್ಯಮ ಕಲಿತಿರುವವರ ಬೇಡಿಕೆ ಸಾಕಷ್ಟಿದೆ. ಇವುಗಳಲ್ಲಿ ನಗರ ಪ್ರದೇಶದ ಮಕ್ಕಳು ಮಾತ್ರವೇ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿದೆ. ಕಳೆದ 10 ವರ್ಷದ ಅಂಕಿ ಅಂಶಗಳನ್ನು ತರಿಸಿ ಅಧ್ಯಯನ ಮಾಡಿದ್ದೇನೆ. ಆ ನಂತರವೇ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಇದರ ಜೊತೆಗೆ ಸಿಬಿಎಸ್ ಸಿ, ಐಸಿಎಸ್ ಸಿಯಂತಹ ರಾಜ್ಯದ ಎಲ್ಲ ಆಂಗ್ಲಮಾಧ್ಯಮ ಶಾಲೆಗಳಲ್ಲೂ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಮಾತೃಭಾಷೆಯ ಮಹತ್ವ, ಅದರಿಂದ ಮಾತ್ರ ನಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕಲು ಸಾಧ್ಯ ಎನ್ನುವುದನ್ನು ನಾನು ಮನಸಾರೆ ಒಪ್ಪಿಕೊಂಡಿದ್ದೇನೆ ಎಂದೂ ಕುಮಾರಸ್ವಾಮಿ ವಿವರಿಸಿದರು. 

ಸರಕಾರ ಕನ್ನಡ ಭಾಷೆಗೆ ನೀಡಿರುವ ಮಹತ್ವ, ಕನ್ನಡ ತಂತ್ರಾಂಶ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಕುರಿತು ಕುಮಾರಸ್ವಾಮಿ ಸುದೀರ್ಘವಾಗಿ ವಿವರಿಸಿದರು. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಇಟ್ಟಿರುವ ಹೆಜ್ಜೆಗಳ ಕುರಿತೂ ಮಾಹಿತಿ ನೀಡಿದರು. 

ಕನ್ನಡ ಭಾಷೆಯ ಇತಿಹಾಸ, ಪರಂಪರೆ, ಕನ್ನಡದ ಬೆಳವಣಿೆಗೆಗೆ ಕೊಡುಗೆ ನೀಡಿರುವ ಮಹಾನ್ ಪುರುಷರನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನ ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button