Latest

ಆಡಂಬರದ ಜಾತ್ರೆಯಾಗದಿರಲಿ ಬೆಳಗಾವಿ ಅಧಿವೇಶನ

     ಮಾನ್ಯರೇ,

ಮತ್ತೆ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಆರಂಭಗೊಂಡಿದೆ. ಬೆಳಗಾವಿಯ ಸುವರ್ಣಸೌಧ ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದಾಗ ಈ ಭಾಗದ ಜನತೆ ಅದ್ಭುತ ಕನಸುಗಳನ್ನು ಕಂಡಿದ್ದರು. ಆದರೆ ಇಂದು ಮರಳಿ ನಿಂತು ನೋಡಿದಾಗ ಅದು ಎಷ್ಟರಮಟ್ಟಿಗೆ ಫಲಪ್ರದವಾಯಿತು ಎಂಬುದನ್ನು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಇದಕ್ಕೆ ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದನ್ನು ಜನತೆ ಗಮನಿಸಿಲ್ಲವೆಂದಲ್ಲ. ಆದರೆ ಜನತೆ ಅಸಹಾಯಕರಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭುವಾಗುವುದು ಚುನಾವಣೆಯವರೆಗೆ ಮಾತ್ರ, ಚುನಾವಣೆಯ ನಂತರ ಪ್ರಜೆಗಳೇ ಬೇರೆ ಪ್ರಭುಗಳೇ ಬೇರೆ, ಅವರನ್ನು ಯಾರು ಕೂಡ ಪ್ರಶ್ನಿಸಲು ಸಾಧ್ಯವಿಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿರುವುದು ಪ್ರಜಾಪ್ರಭುತ್ವದ ದುರಂತ. ಮಾನ್ಯರೇ, ಒಂದು ವೇಳೆ ಇದಕ್ಕೆ ಕಡಿವಾಣ ಹಾಕುವ ಮನಸ್ಸು ತಮ್ಮಲ್ಲಿದ್ದರೆ, ನಮ್ಮ ವಿನಂತಿ ಇಂತಿದೆ,
೧) ೩೬೫ ದಿವಸದಲ್ಲಿ ಕೇವಲ ೧೦ ದಿನ ನಡೆಯುವ ಅಧಿವೇಶನದ ಸಂಪೂರ್ಣ ಸಮಯವನ್ನು ಉತ್ತರಕರ್ನಾಟಕದ ಅಸ್ಮಿತೆಯ ಬಗ್ಗೆ, ಅಭಿವೃದ್ಧಿ ಬಗ್ಗೆ, ಇಲ್ಲಿನ ರೈತರ, ಬಡವರ, ಕಾರ್ಮಿಕರ, ಉದ್ದಿಮೆಗಳ, ನಗರಗಳ ಸಂಚಾರ ಮತ್ತಿತರ ಮೂಲಭೂತ ಕುಂದುಕೊರತೆಗಳ ಬಗ್ಗೆ ಚಿಂತಿಸಲು, ವ್ಯವಸ್ಥೆ ರೂಪಿಸಲು, ಕಾರ್ಯರೂಪಕ್ಕೆ ತರುವ ಯೋಜನೆಗಳನ್ನು ಹಾಕಿಕೊಳ್ಳುವಿರೆಂದು ನಂಬಿದ್ದೇವೆ.
೨) ಈ ಭಾಗದ ಜನ ಪ್ರತ್ಯೇಕ ರಾಜ್ಯವನ್ನು ಕೇಳುವುದಿಲ್ಲ. ಅದು ಈ ಭಾಗಕ್ಕೆ ಆಗುತ್ತಿರುವ ನಿರಂತರ ಅನ್ಯಾಯಕ್ಕೆ ಪರಿಹಾರವಲ್ಲ. ಹಾಗೆ ಕೇಳುವ ಬಯಕೆ ಇದ್ದಿದ್ದರೆ ಇಲ್ಲಿಯವರೆಗೆ ಸುಮ್ಮನೆ ಕೂರುತ್ತಿರಲಿಲ್ಲ. ಅಖಂಡ ಕರ್ನಾಟಕದ ಆಶೋತ್ತರಗಳಿಗೆ ಬದ್ಧರಾಗಿದ್ದೇವೆ. ಆದರೆ ಪರಿಹಾರ ಸಿಗಬೇಕಾದರೆ ಪ್ರತ್ಯೇಕ ರಾಜ್ಯದ ಬದಲು, ಆಡಳಿತ ಮತ್ತು ಅಧಿಕಾರದ ವಿಕೇಂದ್ರೀಕರಣವಾಗಬೇಕು. ಯಾವ ರೀತಿ ಧಾರವಾಡ ಮತ್ತು ಗುಲ್ಬರ್ಗಾದ ಮಾನ್ಯ ಉಚ್ಛನ್ಯಾಯಾಲಯದ ಪೀಠಗಳು ಈ ಭಾಗದ ಪ್ರಕರಣಗಳನ್ನು ಇತ್ಯರ್ಥಪಡಿಸಿ ನ್ಯಾಯ ಒದಗಿಸುತ್ತಿವೆಯೋ ಅದೇ ರೀತಿ, ಬೆಂಗಳೂರಿನ ವಿಧಾನಸೌಧದಲ್ಲಿ ಇರುವಂತಹ ಆಡಳಿತ ಕಛೇರಿಗಳು ಈ ಸುವರ್ಣಸೌಧದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಲಿ. ನಮ್ಮ ಭಾಗದ ನಾಯಕರು ಬೆಂಗಳೂರಿಗೆ ಹೋಗುವ ಬದಲು ಇಲ್ಲಿಯೇ ಆಡಳಿತ ನಡೆಸಿದರೆ ಅವರು ಜನತೆಗೆ ಹತ್ತಿರವಾಗುತ್ತಾರೆ ಮತ್ತು ಬೆಲೆಬಾಳುವ ಸೌಧದ ಉಪಯೋಗವೂ ಆಗುತ್ತದೆ. ಅನಿವಾರ್ಯವಿದ್ದಾಗ ಮಾತ್ರ ಅಲ್ಲಿ ಅಥವಾ ಇಲ್ಲಿ ಜಂಟಿಯಾಗಿ ಅಧಿವೇಶನ ಮತ್ತಿತರ ಕಾರ್ಯಯೋಜನೆ ಹಾಕಿಕೊಳ್ಳಬಹುದು. ಕೊನೇ ಪಕ್ಷ ಇದನ್ನು ಪ್ರಾಯೋಗಿಕವಾಗಿಯಾದರೂ ಮಾಡಿ ನೋಡಬೇಕು.
೩) ಇಲ್ಲಿ ಬಂದ ಕೂಡಲೇ ತಾವು ಸಾಲಮನ್ನಾ, ಕಬ್ಬಿನ ಸಮಸ್ಯೆ, ಬೆಳೆವಿಮೆ, ರೈತರ ಆತ್ಮಹತ್ಯೆ ವಿಷಯವಾಗಿ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಇವು ಒಂದಕ್ಕೊಂದು ತಳಕು ಹಾಕಿಕೊಂಡಿರುವ ಸಮಸ್ಯೆಗಳು. ನಿಜವಾಗಿಯೂ ರೈತರು ಬೆಳೆಯುವ ಬೆಳೆಗಳಿಗೆ ಈ ದುರ್ಗತಿ ಏಕೆ ಬರುತ್ತದೆ ಎಂಬುದನ್ನು ಅವಲೋಕಿಸಿದಾಗ ಇದರ ಸಂಕೀರ್ಣತೆ ಅರ್ಥವಾಗುತ್ತದೆ. ರೈತ ಪ್ರತಿವರ್ಷ ತನ್ನ ಜಮೀನಿನಲ್ಲಿ ಸಾಲಸೋಲ ಮಾಡಿ ಬೆಳೆ ಬೆಳೆಯುತ್ತಾನೆ. ಆ ಬೆಳೆಗೆ ಯಾವುದೇ ರೋಗ ಬಾರದೇ, ಅತೀವೃಷ್ಠಿ, ಅನಾವೃಷ್ಠಿ, ಪ್ರಕೃತಿ ವಿಕೋಪಗಳಾಗದೇ, ನೀರಾವರಿ ಮೂಲಗಳಿಂದ ಸಮರ್ಪಕ ನೀರು ಪೂರೈಕೆಯಾದರೆ, ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡಿದ್ದರೆ ಮಾತ್ರ ನಿರೀಕ್ಷಿಸಿದಂತೆ ಬೆಳೆ ಬರಬಹುದು.
ಆ ರೀತಿ ಬೆಳೆ ಬಂದರೂ ಅದಕ್ಕೆ ಸೂಕ್ತ ಬೆಲೆ ಅದೂ ಕೂಡ ಸಕಾಲದಲ್ಲಿ ದೊರೆತರೆ ಮಾತ್ರ ಆತ ಬದುಕಿಕೊಂಡು ಮುಂದಿನ ವರ್ಷ ಎಲ್ಲರೂ ಉಣ್ಣುವಂತೆ ಭೂಮಿಯಲ್ಲಿ ಅನ್ನವನ್ನು ಬೆಳೆಯಬಲ್ಲನು. ಇಲ್ಲವಾದರೆ ಮತ್ತೆ ಸಾಲದ ಶೂಲಕ್ಕೆ ಬಲಿಯಾಗುವನು. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ಬೆಳೆವಿಮೆ ಯೋಜನೆ ತಂದಿತು. ಆದರೆ ವಿಮಾಕಂಪನಿಗಳ ತಪ್ಪಿನಿಂದಲೋ ಅಥವಾ ಇನ್ನಾವುದೋ ದೋಷದಿಂದಲೋ ಅದು ರೈತರಿಗೆ ಅನುಕೂಲವಾಗುವ ಬದಲು ವಿಮಾಕಂಪನಿಗಳಿಗೆ ೧೦ ಸಾವಿರ ಕೋಟಿ ಲಾಭ ಕೊಡಿಸಿರುವುದಾಗಿ ಇತ್ತೀಚೆಗೆ ಎಲ್ಲರಿಗೂ ತಿಳಿದು ಬಂದಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ತನ್ನದೇ ಆದ ಬೆಳೆವಿಮೆ ಯೋಜನೆಯನ್ನು ಮಾಡ ಹೊರಟಿದೆ. ಆದರೆ ಅದೂ ಸಹ ಕೇಂದ್ರದ ಹಾದಿಯನ್ನೇ ತುಳಿಯಬಾರದೆಂಬುದೇ ನಮ್ಮ ಮನವಿ.
ಉದಾಹರಣೆಗೆ ಬೆಳಗಾವಿ ಜಿಲ್ಲೆಯ ಕರೀಕಟ್ಟಿ ಎಂಬ ಗ್ರಾಮದ ರೈತರ ಬೆಳೆಹಾನಿಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದೇವೆ. ಅದರಲ್ಲಿ ರೈತರ ಒಣಬೇಸಾಯದ ಜಮೀನುಗಳನ್ನು ನೀರಾವರಿ ಜಮೀನುಗಳೆಂದು ತಪ್ಪಾಗಿ ಬ್ಯಾಂಕಿನವರು ನಮೂದಿಸಿರುವುದರಿಂದ ವಿಮಾಕಂಪನಿಯು ಪರಿಹಾರ ನೀಡಿರುವುದಿಲ್ಲ. ನೀರಾವರಿ ಮೂಲ ಯಾವುದಿದ್ದರೇನು ಹಾನಿ ಹಾನಿಯೇ ಅಲ್ಲವೇ? ಆದ್ದರಿಂದ ಇಂಥ ಯೋಜನೆಗಳು ಜಾರಿಗೊಳ್ಳಬೇಕಾದರೆ ಬಹಳ ದೂರದೃಷ್ಠಿ ಮತ್ತು ಪ್ರಾಮಾಣಿಕ ಕಾಳಜಿ ಮುಖ್ಯ. ಯಾವುದೋ ಒಂದು ತಾಂತ್ರಿಕ ನೆಪವೊಡ್ಡಿ ರೈತರಿಗೆ ಮೋಸ ಮಾಡಬಹುದು. ಆದರೆ ಅದು ಬಹಳ ದಿವಸ ನಡೆಯುವುದಿಲ್ಲ ಎಂಬುದನ್ನು ಸರ್ಕಾರಗಳು ಮತ್ತು ಸಂಬಂಧಿಸಿದ ಇಲಾಖೆಯವರು ಲಕ್ಷದಲ್ಲಿಡಬೇಕು.
೪)ರೈತರಿಗೆ ಸಾಲಮನ್ನಾದಂಥ ದಯಾಭಿಕ್ಷೆಗಿಂತ ಅವರು ಗೌರವದಿಂದ ತಮ್ಮ ದುಡಿಮೆಯ ಹಕ್ಕಿನ ಬೆಲೆಯನ್ನು ಪಡೆಯುಂತಾಗಬೇಕು. ಅದಕ್ಕಾಗಿ ಸರ್ಕಾರ ಹೋಬಳಿ ಮಟ್ಟದಲ್ಲಿ ರೈತರ ಬೆಳೆಗಳ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಕನಿಷ್ಠವಲ್ಲದ ನ್ಯಾಯೋಚಿತ ಬೆಂಬಲ ಬೆಲೆಯೊಂದಿಗೆ ಅಲ್ಲಿ ಬೆಳೆ ಖರೀದಿಯಾಗಬೇಕು. ಆ ಖರೀದಿಸಿದ ಬೆಳೆಗಳನ್ನು ಸಂಗ್ರಹಿಸಲು ಉಗ್ರಾಣಗಳನ್ನು ಕಟ್ಟಬೇಕು. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಬೇರೆಡೆ, ಅನ್ಯರಾಜ್ಯಕ್ಕೆ, ವಿದೇಶಕ್ಕೆ ಮಾರಾಟ ಮಾಡುವಂತಾಗಬೇಕು.
೫)ಕಬ್ಬಿಗೆ ಕುರಿತಂತೆ ಹೇಳುವುದೇನೆಂದರೆ, ಕಬ್ಬು ನಿಯಂತ್ರಣ ಕಾಯ್ದೆಯ ಅನ್ವಯ ಕಾರ್ಖಾನೆಯವರು ಕಬ್ಬಿಗೆ ಕೇಂದ್ರ ಸರ್ಕಾರವು ನಿರ್ದಿಷ್ಠಪಡಿಸಿದ ಎಫ್.ಆರ್.ಪಿ ದರವನ್ನು [ಅಥವಾ ರಾಜ್ಯ ಸರ್ಕಾರವು ನಿರ್ದಿಷ್ಠಪಡಿದ ಅದಕ್ಕಿಂತ ಹೆಚ್ಚಿನ ಎಸ್.ಎ.ಪಿ ದರವನ್ನು] ಕೊಡದೇ ಹೋದರೆ ಅವರ ಮೇಲೆ ಸಕ್ಕರೆ ನಿರ್ದೇಶಕರು ರಿಕವರಿ ಆದೇಶವನ್ನು ನೀಡುತ್ತಾರೆ. ಅದರ ಅನ್ವಯ ಜಿಲ್ಲಾಧಿಕಾರಿಗಳು ಸಂಬಂಧಿತ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಮತ್ತು ಆಸ್ತಿಯನ್ನು ಜಪ್ತಿ ಮಾಡಿ ಮಾರಾಟ ಮಾಡಿ ರೈತರಿಗೆ ಹಣ ಕೊಡಿಸುವ ಅಧಿಕಾರ ಹೊಂದಿದ್ದಾರೆ. ಆದರೆ ರಾಜಕೀಯ ಒತ್ತಡ ಮತ್ತು ಕಾರ್ಖಾನೆಯವರ ಪ್ರಭಾವದಿಂದ ಇದಾವುದೂ ಸಾಧ್ಯವಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ರೈತರು ಮತ್ತು ಅವರ ಸಂಘಟನೆಗಳು ಎಂದಿಗೂ ಒಂದಾಗುವುದಿಲ್ಲ. ಹಾಗೇನಾದರೂ ಒಂದಾಗಿ ಕನಿಷ್ಠ ಮೂರು ವರ್ಷ ಕಬ್ಬನ್ನೇ ಬೆಳೆಯದಿದ್ದರೆ, ಕಾರ್ಖಾನೆಯವರು ತಾವೇ ಮುಂಗಡ ಹಣ ಕೊಟ್ಟು ಕಬ್ಬು ಬೆಳೆಸಲು ರೈತರ ದುಂಬಾಲು ಬೀಳಬೇಕಾಗಬಹುದು. ಆಗ ರೈತರಿಗೆ ಬೆಳೆ ಬೆಳೆಯುವ ಪ್ರತೀ ಹಂತದಲ್ಲಿ ಸರ್ಕಾರ, ಕಾರ್ಖಾನೆ, ಕೃಷಿ ಇಲಾಖೆ ಎಲ್ಲವೂ ಕೂಡಿ ರೈತರಿಗೆ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ಯಂತ್ರ, ಸಲಕರಣೆ, ಗೊಬ್ಬರ, ಸಾವಯವ ಗೊಬ್ಬರ, ಹನಿನೀರಾವರಿ, ಕೃಷಿಹೊಂಡ, ಮುಂತಾದವುಗಳನ್ನು ಒದಗಿಸಿ, ರೈತನ ಕೌಟುಂಬಿಕ, ಆರ್ಥಿಕ ಸ್ಥಿತಿಗೆ ತಕ್ಕಂತೆ ಸಹಾಯಧನ, ಮಾರ್ಗದರ್ಶನ ನೀಡಬಹುದು. ಬೆಳೆ ಬಂದ ತಕ್ಷಣ ಕಾರ್ಖಾನೆಯವರು ತಮ್ಮ ಸ್ವಂತ ಖರ್ಚಿನಲ್ಲಿ ಕಬ್ಬನ್ನು ಕಾರ್ಖಾನೆಗೆ ಸಾಗಿಸಬಹುದು. ರೈತರ ಬದಲಿಗೆ ಕಬ್ಬನ್ನು ಮಾತ್ರ ಅರೆದು ಸಕ್ಕರೆಯ ಜೊತೆಗೆ, ಮೊಲ್ಯಾಸಿಸ, ಬಗ್ಯಾಸ, ಕೋಜನರೇಶನ ಮತ್ತಿತರ ಉತ್ಪನ್ನಗಳಲ್ಲಿ ರೈತರಿಗೆ ಪಾಲುದಾರಿಕೆಯ ರೂಪದಲ್ಲಿ ಹೆಚ್ಚಿನ ಲಾಭ ನೀಡಬಹುದು. ಇದು ನಮ್ಮ ಕನಸು. ಇದು ಕನಸಾಗಿಯೇ ಉಳಿಯುವುದೇನೋ?

  • ಸುನೀಲ ಎಸ್. ಸಾಣಿಕೊಪ
    ಮಹಾಂತೇಶನಗರ, ಬೆಳಗಾವಿ

                           

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button