*ಕದಲೂರು ಉದಯ್ ಗೌಡ ಕಾಂಗ್ರೆಸ್ ಸೇರ್ಪಡೆ*

*ಕದಲೂರು ಉದಯ್ ಗೌಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಂಡ್ಯ ಭಾಗದ ನಾಯಕರಾದ ಉದಯ್ ಅವರನ್ನು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಉದಯ್ ಅವರು ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರುತ್ತಿದ್ದಾರೆ. ಮದ್ದೂರು ಕ್ಷೇತ್ರ ರಾಜ್ಯ ರಾಜಕಾರಣಕ್ಕೆ ಬಹಳ ಉತ್ತಮ ನಾಯಕರನ್ನು ಕೊಟ್ಟಿದೆ. ಮಾದೇಗೌಡರು, ಮಂಚೇಗೌಡರು ಹಾಗೂ ಎಸ್.ಎಂ ಕೃಷ್ಣ ಅವರನ್ನು ಕೊಟ್ಟಿರುವ ಕ್ಷೇತ್ರ ಇದಾಗಿದೆ. ಈ ಕ್ಷೇತ್ರಕ್ಕೆ ತನ್ನದೇ ಆದ ದೊಡ್ಡ ಇತಿಹಾಸವಿದೆ.

ನಮ್ಮ ಕೆಲವು ತಪ್ಪುಗಳಿಂದ ಈ ಕ್ಷೇತ್ರ ಕೈತಪ್ಪಿಹೋಗಿತ್ತು. ಈಗ ನಮ್ಮ ನಾಯಕರೆಲ್ಲ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದು, ಉದಯ್ ಅವರು ಬಹಳ ದಿನಗಳಿಂದ ಈ ಭಾಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಭಾಗದಲ್ಲಿ ಜೆಡಿಎಸ್ ನ ಡಿ ಸಿ ತಮ್ಮಣ್ಣ ಅವರನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಉದಯ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಗುರುಚರಣ್ ಅವರು ಕಷ್ಟಕಾಲದಲ್ಲಿ ತಳಮಟ್ಟದಲ್ಲಿ ಪಕ್ಷ ಉಳಿಸಿಕೊಂಡು ಬಂದಿದ್ದಾರೆ. ಮಧುಮಾದೇಗೌಡರು ಜನರ ಆಶೀರ್ವಾದದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ.

ನಮ್ಮ ಪಕ್ಷದ ಕಾರ್ಯಾಧ್ಯಕ್ಷರಾದ ಧೃವನಾರಾಯಣ ಅವರು ಮಂಡ್ಯ ಭಾಗದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರು ಇಂದು ನಮ್ಮ ಜತೆ ಇಲ್ಲ. ಹೀಗಾಗಿ ನಾವು ಬಹಳ ದುಃಖದಲ್ಲಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂರ್ಯ, ಚಂದ್ರರು ಉದಯಿಸಿ ಮುಳುಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಅದೇ ರೀತಿ ಹುಟ್ಟು ಸಾವನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಕಾಲ ಮುಂದೆ ಸಾಗುತ್ತಲೇ ಇರುತ್ತದೆ. ಅದೇ ರೀತಿ ಪ್ರಜಾಪ್ರಭುತ್ವ, ರಾಜಕಾರಣದಲ್ಲಿ ನಾವು ನಮ್ಮ ಕರ್ತವ್ಯ ಮಾಡಬೇಕಿದೆ. 

ಪ್ರಧಾನಮಂತ್ರಿಗಳು ನಿನ್ನೆ ಮಂಡ್ಯಕ್ಕೆ ಭೇಟಿ ನೀಡಿ ಕೇವಲ ಕಾಂಗ್ರೆಸ್ ಪಕ್ಷವನ್ನು ಮಾತ್ರ ನೇರ ಗುರಿಮಾಡಿಕೊಂಡು ಮಾತಾಡಿದ್ದು, ಜೆಡಿಎಸ್ ಪಕ್ಷದ ಬಗ್ಗೆ ಒಂದೂ ಮಾತನಾಡಿಲ್ಲ. ಇದು ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನಾನು ಉದಯ್, ಗುರುಚರಣ್ ಅವರು ಹಾಗೂ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯ್ ಅವರನ್ನು ಜಿಲ್ಲೆಯ ಎಲ್ಲಾ ನಾಯಕರ ಸಮ್ಮುಖದಲ್ಲಿ ಇಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. 

ಉದಯ್ ಅವರಿಗೆ ಟಿಕೆಟ್ ನೀಡಲಾಗುವುದೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ‘ನಾವು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಬೇಷರತ್ತಾಗಿ ಬರಬೇಕು. ಪಕ್ಷಕ್ಕೆ ದುಡಿಯಬೇಕು. ನಂತರ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧವಾಗಿರಬೇಕು. ಪಕ್ಷ ಅಗತ್ಯ ಸಮಯದಲ್ಲಿ ಸೂಕ್ತ ತೀರ್ಮಾನ ಮಾಡಲಿದೆ’ ಎಂದು ತಿಳಿಸಿದ್ದೇನೆ ಎಂದರು.

ಉದಯ್ ಅವರು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದರು ಎಂಬ ಅಪಾದನೆ ಇದೆಯಲ್ಲ ಎಂದು ಕೇಳಿದಾಗ ‘ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದರು. ವಿರೋಧ ಪಕ್ಷದಲ್ಲಿದ್ದಾಗ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಜತೆ ಇದ್ದ ಎ.ಮಂಜು ಅವರು ಈಗ ಜೆಡಿಎಸ್ ಗೆ ಹೋಗಿದ್ದಾರೆ. ಜೆಡಿಎಸ್ ನಲ್ಲಿದ್ದ ಶಿವಲಿಂಗೇಗೌಡರು, ಗುಬ್ಬಿ ವಾಸು, ಮಧುಬಂಗಾರಪ್ಪ ಸೇರಿದಂತೆ ಅನೇಕರು ಕಾಂಗ್ರೆಸ್ ಗೆ ಬಂದಿದ್ದಾರೆ. ನಾನು ಕುಮಾರಸ್ವಾಮಿ ಅವರು ಪರಸ್ಪರ ಎದುರಾಳಿಯಾಗಿ ಗುದ್ದಾಡಿದ್ದರೂ ಪೈಕಮಾಂಡ್ ನಿರ್ದೇಶನದ ಮೇರೆಗೆ ಅವರ ಜತೆ ಸೇರಿ ಮೈತ್ರಿ ಸರ್ಕಾರ ಮಾಡಿದ್ದೇವೆ. ರಾಜಕಾರಣದಲ್ಲಿ ಇಂತಹ ಬೆಳವಣಿಗೆ ಸಹಜ’ ಎಂದು ತಿಳಿಸಿದರು.

ಪುಟ್ಟಣ್ಣ ಅವರು ಪಕ್ಷ ಸೇರ್ಪಡೆ ಯಾವಾಗ ಎಂದು ಕೇಳಿದಾಗ, ‘ಅವರ ಅರ್ಜಿ ಇನ್ನು ಬಂದಿಲ್ಲ. ಅರ್ಜಿ ಬಂದ ನಂತರ ಎಲ್ಲರಿಗೂ ಮಾಹಿತಿ ನೀಡುತ್ತೇವೆ. ಈ ಕಚೇರಿ ದೇವಾಲಯವಿದ್ದಂತೆ. ಈ ದೇವಾಲಯಕ್ಕೆ ಯಾರು ಬೇಕಾದರೂ ಬರಬಹುದು’ ಎಂದರು.

ಮದ್ದೂರು ವಿಧಾನಸಭೆ ಕ್ಷೇತ್ರದ ಕದಲೂರು ಉದಯ್ ಗೌಡ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಎಂಎಲ್ಸಿಗಳಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಕಾಂಗ್ರೆಸ್ ಮುಖಂಡ ಗುರುಚರಣ್, ಡಿಸಿಸಿ ಅಧ್ಯಕ್ಷ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button