Latest

ಕರಗಾಂವ್ ಏತ ನೀರಾವರಿ ವಿಷಯದಲ್ಲಿ ಸಂಸದರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ -ಐಹೊಳೆ

    ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ
ಕರಗಾಂವ್ ಏತ ನೀರಾವರಿ ಯೋಜನೆ ವಿಷಯದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಜನರ ದಿಕ್ಕು ತಪ್ಪಿಸುತ್ತಿದ್ದು, ನಾನೇ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಯೋಜನೆ ಜಾರಿಗೆ ಮನವಿ ಮಾಡಿದ್ದೇನೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.
ಮಂಗಳವಾರ ಮಮದಾಪುರ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಸ್ಥಳೀಯ ಶಾಸಕರ 4ಲಕ್ಷ ರೂ ಅನುದಾನದಲ್ಲಿ ಮಂಜೂರಾದ ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಹಿಂದಿನ ಲೋಕಸಭೆ ಚುನಾವಣೆ ವೇಳೆ ಯೋಜನೆ ಮಂಜೂರು ಮಾಡಿಸುವುದಾಗಿ ಪ್ರಕಾಶ ಹುಕ್ಕೇರಿ ಹೇಳಿದ್ದರು. ಆದರೆ ಈವರೆಗೆ ಪ್ರಯತ್ನಿಸದೆ ಈಗ ಚುನಾವಣೆ ಸಮೀಪಿಸುತ್ತಿರುವಾಗ ಪುನಃ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈಗಾಗಲೇ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಕರಗಾಂವ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದ್ದೇನೆ. ಸಚಿವರು ಸಕಾರಾತ್ಮಕ ಸ್ಪಂಧನೆ ನೀಡಿದ್ದಾರೆ ಎಂದರು.
ಲೋಕಸಭಾ ಚುನಾವಣೆಯ ಒಳಗಾಗಿ ಮೈತ್ರಿ ಸರಕಾರ ಬಿದ್ದು ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲ್ಲಿದ್ದು, ಲೋಕಸಭಾ ಚುನಾವಣೆ ಜೊತೆ ಉಪಚುನಾವಣೆ ನಡೆಯಲೂಬಹುದು ಎಂದು ಐಹೊಳೆ ಭ್ಯವಿಷ್ಯ ನುಡಿದರು.
ಪ್ರಸಕ್ತ ವರ್ಷದ ಬರಗಾಲದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ಅವಶ್ಯವಿದ್ದಲ್ಲಿ ಕೊಳವೆ ಬಾವಿ ಕೊರೆಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು ಬಯಲು ಸೀಮೆ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಿಸಲು ರಾಜ್ಯ ಸರ್ಕಾರ ಒಂದು ಕೋಟಿ ರೂ ಅನುದಾನ ಮಂಜೂರು ನೀಡಿದೆ. ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುತ್ತದೆ. ಬರಪೀಡಿತ ಪ್ರದೇಶಗಳಾದ ನಾಗರಮುನ್ನೋಳಿ ಮತ್ತು ಕರೋಶಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ತಲಾ 50 ಲಕ್ಷ ರೂ ದಂತೆ ಕ್ರಿಯಾ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಪವನ ಕತ್ತಿ ಮಾತನಾಡಿದರು. ಸುರೇಶ ಬೆಲ್ಲದ, ಸದಾಶಿವ ಹಳಂಗಳಿ, ಸದಾಶಿವ ಗೋರ್ಪಡೆ, ಅಣ್ಣಾಸಾಹೇಬ ಖೇಮಲಾಪೂರೆ, ಇಂಜನೀಯರ್ ಎಸ್.ಎಸ್.ಹೊಸಮನಿ, ಬಸವರಾಜ ಬೆಕ್ಕೇರಿ, ಭೀಮಪ್ಪ ವಡರೇಟ್ಟಿ, ಭರಮಪ್ಪ ಬೆಕ್ಕೇರಿ, ಸಂಜು ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button