Latest

ಕಸದಿಂದ ವಿದ್ಯುತ್ ಉತ್ಪಾದನೆ : ಸರ್ಕಾರದ ಚಿಂತನೆ


     ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಸಮಸ್ಯೆ ನಿವಾರಣೆಗಾಗಿ ಫ್ರಾನ್ಸ್ ದೇಶದ ಮಾದರಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಮತ್ತು ಬೃಹತ್ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊತ್ತ ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ಅವರು ರಾಜ್ಯ ವಿಧಾನ ಸಭೆಯಲ್ಲಿ ಬುಧವಾರ ಪ್ರಕಟಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಸ್. ಟಿ ಸೋಮಶೇಖರ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು ಫ್ರಾನ್ಸ್ ದೇಶ ಕಸದಿಂದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಿದಲ್ಲಿ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ತ್ಯಾಜ್ಯ ಘಟಕಗಳಿಂದ ಹೊರಹೊಮ್ಮುವ ದುರ್ವಾಸನೆ ತಡೆಯಲು ಗಾಳಿ ಕೊಯ್ಲು ನಿರ್ವಹಣೆ ಹಾಗೂ ವಾಸನೆ ನಿಯಂತ್ರಣ ದ್ರವ ಸಿಂಪಡಣೆಯ ಹೊಸ ತಂತ್ರಜ್ಞಾನದ ಅಳವಡಿಸುತ್ತ್ತಿರುವುದಾಗಿ ಪರಮೇಶ್ವರ್ ಅವರು ತಿಳಿಸಿದರು.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಅಗಾಧ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಸದ ಬಗ್ಗೆ ವಿವರಿಸಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಆರಂಭದಲ್ಲಿ ವ್ಯಾಪ್ತಿ ೨೫೦ ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದ ಬೆಂಗಳೂರು ನಗರ ಇದೀಗ ೮೦೦ ಚದರ ಕಿ.ಮೀ ಹರಡಿಕೊಂಡಿದೆ. ದಿನ ಒಂದಕ್ಕೆ ಆರು ಸಾವಿರ ಮೆಟ್ರಿಕ್ ಟನ್ ಕಸ ಉತ್ಪಾದನೆ ಆಗುತ್ತದೆ ಎಂದು ವಿವರಿಸಿದರು.
ಕಸ ವಿಲೇವಾರಿ ಕುರಿತಂತೆ ಸದನದಲ್ಲಿ ಶಾಸಕರು ಉಪಪ್ರಶ್ನೆಗಳ ಕೇಳಲು ಪೈಪೋಟಿ ನಡೆಸಿದಾಗ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಎಲ್ಲರಿಗೂ ಸಮಾನವಾಗಿ ಕಸವನ್ನು ಹಂಚಿಕೆ ಮಾಡಿ ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು. ಅಲ್ಲದೆ, ಸದಸ್ಯರಿಗೆ ಕಸ ನಿರ್ವಹಣೆಯ ಸಮಸ್ಯೆ ಪರಿಹಾರದ ಜಟಿಲತೆಯೂ ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಟ್ಟಂತಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button