ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ 17 ಜನರ ಪೈಕಿ ಇಬ್ಬರ ನಾಮಪತ್ರ ಜಿಲ್ಲಾ ಚುನಾವಣಾ ಆಯೋಗ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ 15 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಸೋಮವಾರ (ಏ. 8) ಕೊನೇಯ ದಿನವಾಗಿದ್ದು ಆ ಬಳಿಕ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆ ನಿಚ್ಚಳವಾಗಲಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 15 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಬಿಜೆಪಿ , ಜೆಡಿಎಸ್, ಬಿಎಸ್ಪಿ, ಶಿವಸೇನೆ ಸೇರಿದಂತೆ ವಿವಿಧ ಪಕ್ಷಗಳು ಮತ್ತು ಪಕ್ಷೇತರರು ಸೇರಿ 17 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗೆ ಸಲ್ಲಿಸಿದ್ದರು. ಅವರಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಮೋದ ಮಡಗಾಂವ್ಕರ್ ಅವರ ನಾಮಪತ್ರದಲ್ಲಿ ನಮೂದಿಸಿದ್ದ 4 ಜನ ಸೂಚಕರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತವಾಯಿತು.
ಶಿವಸೇನೆ ಪಕ್ಷದ ಅಭ್ಯರ್ಥಿ ಕೃಷ್ಣಾಜಿ ಪಾಟೀಲ ಅವರು ತಮ್ಮದು ರಾಷ್ಟ್ರೀಯ ಪಕ್ಷವೆಂದು ಹೇಳಿಕೊಂಡಿದ್ದು ಕೇವಲ ಒಬ್ಬ ಸೂಚಕರ ಹೆಸರನ್ನು ನಮೂದಿಸಿದ್ದರು. ಆದರೆ ಶಿವಸೇನೆ ರಾಷ್ಟ್ರೀಯ ಪಕ್ಷವಲ್ಲ ಎಂದು ಹೇಳಿರುವ ಚುನಾವಣಾ ಆಯೋಗ ನಿಯಮದಂತೆ 10 ಸೂಚಕರ ಹೆಸರು ನಮೂದಾಗಿರದ ಕಾರಣ ನೀಡಿ ಅವರ ನಾಮಪತ್ರವನ್ನು ತಿರಸ್ಕರಿಸಿದೆ.
ಬಿಜೆಪಿ – ಜೆಡಿಎಸ್ ಫೈಟ್
ಕಣದಲ್ಲಿರುವವರ ಪೈಕಿ ಬಿಜೆಪಿಯ ಅಭ್ಯರ್ಥಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಜೆಡಿಎಸ್ ನ ಆನಂದ ಅಸ್ನೋಟಿಕರ್ ಪ್ರಮುಖರಾಗಿದ್ದಾರೆ. ಇವರಿಬ್ಬರ ನಡುವೆ ಸ್ಪರ್ಧೆ ನಡೆಯುವ ನಿರೀಕ್ಷೆ ಇದೆ. ಸೋಮವಾರ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಕ್ತಾಯವಾದ ಬಳಿಕ ಸ್ಪರ್ಧಿಗಳು ಯಾರ್ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಕಾಂಗ್ರೆಸ್ ಅಸಹಕಾರ -ದೇಶಪಾಂಡೆ ದೂರ
ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ಟಿಕೇಟ್ ಜೆಡಿಎಸ್ ಪಾಲಾಗಿದೆ. ಆದರೆ ಹೈಕಮಾಂಡ್ ನಿರ್ಧಾರದ ಕುರಿತು ಕಾಂಗ್ರೆಸ್ ನ ಸ್ಥಳೀಯ ಮುಖಂಡರು ತೀವ್ರ ಅಸಮಧಾನಗೊಂಡಿರುವುದು ಸ್ಪಷ್ಟವಾಗಿದೆ. ಇತ್ತೀಚೆಗೆ ಶಿರಸಿಯಲ್ಲಿ ನಡೆದ ಜಂಟಿ ಸಭೆಯಲ್ಲಿ ಪರೋಕ್ಷವಾಗಿ ತಮ್ಮ ಅಸಮಧಾನವನ್ನು ಹೊರಹಾಕಿರುವ ಕಾಂಗ್ರೆಸ್ ನ ಪ್ರಭಾವಿ ಮುಖಂಡ, ಸಚಿವ ಆರ್. ವಿ. ದೇಶಪಾಂಡೆ , ಜೆಡಿಎಸ್ ಅಭ್ಯರ್ಥಿ ಸೋತರೆ ತಮ್ಮ ಮೇಲೆ ಆರೋಪ ಮಾಡಬಾರದು ( ಬ್ಲೇಮಿಂಗ್ ಗೇಮ್ ) ಎಂದು ತಾಕೀತು ಮಾಡಿದ್ದಾರೆ, ಅಷ್ಟೇ ಅಲ್ಲದೆ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರ ನಾಮಪತ್ರ ಸಲ್ಲಿಕೆಗೂ ಬಾರದ ಅವರು ಇದುವರೆಗೂ ಪ್ರಚಾರ ಕಾರ್ಯದಿಂದಲೂ ದೂರ ಉಳಿದಿದ್ದಾರೆ.
ಇನ್ನು ಆನಂದ ಅವರ ತವರಾದ ಕಾರವಾರದ ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ ಸೈಲ್ ಅವರಂತೂ ಬಹಿರಂಗವಾಗಿಯೇ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ತಮ್ಮ ರಾಜಕೀಯ ಶತ್ರುವಾಗಿರುವ ಆನಂದ ಅವರನ್ನು ಸತೀಶ ಸೈಲ್ ಬೆಂಬಲಿಸಲು ಸಾಧ್ಯವಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯಕ್ಕೆ ಹೋಗಲು ತೀರ್ಮಾನ
ಇನ್ನೊಂದೆಡೆ ಶಿವಸೇನೆಯಿಂದ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದ ಕೃಷ್ಣಾಜಿ ಪಾಟೀಲ ಅವರು ಜಿಲ್ಲಾ ಚುನಾವಣಾ ಆಯೋಗವು ತಮ್ಮ ನಾಮಪತ್ರವನ್ನು ಉದ್ದೇಶ ಪೂರ್ವಕವಾಗಿ ತಿರಸ್ಕರಿಸಿದೆ ಎಂದು ಆರೋಪಿಸಿದ್ದಾರೆ. ೧೦ ಸೂಚಕರ ಹೆಸರು ನಮೂದಿಸಬೇಕು ಎಂಬುದನ್ನು ಆಯೋಗವು ಚೆಕ್ ಲೀಸ್ಟ್ನಲ್ಲಿಯೇ ಉಲ್ಲೇಖ ಮಾಡಬೇಕಿತ್ತು. ಆದರೆ ಹಾಗೆ ಮಾಡದೇ ಅವಧಿ ಮೀರಿದ ಬಳಿಕ ತಿಳಿಸಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಕಣದಲ್ಲಿ ಉಳಿದವರು:
ಬಾಲಕೃಷ್ಣ ಪಾಟೀಲ್
ಮೊಹಮದ್ ಝಬರೂದ್ ಖತೀಬ್
ನಾಗರಾಜ ಶಿರಾಲಿ
ಸುನೀಲ್ ಪವಾರ್
ಅನಿತಾ ಅಶೋಕ್ ಶೇಟ್
ಅನಂತಕುಮಾರ್ ಹೆಗಡೆ
ನಾಗರಾಜ ಶೇಟ್
ಚಿದಾನಂದ ಎಚ್ ಹರಿಜನ್
ಮಂಜುನಾಥ್ ಸದಾಶಿವ
ರಾಜ್ ಶೇಖರ್ ಬೆಳ್ಳಿಗಟ್ಟಿ (ಪಕ್ಷೇತರ)
ಕುಂದಾಬಾಯಿ ಗಣಪತಿ ಪರುಲೇಕರ್ (ಪಕ್ಷೇತರ)
ಪ್ರಮೋದ ಮೋಹನ್ ಮಡಗಾಂವ್ಕರ್ ( ಪಕ್ಷೇತರ)
ಆನಂದ ಆಸ್ಕೋಟಿಕರ್ ( ಜೆಡಿಎಸ್)
ಕೃಷ್ಞಾಜಿ ಪಾಟೀಲ್ (ಶಿವಸೇನಾ)
ನಯೀಮು ರೆಹಮಾನ್ ಜೈಲರ್ ( ಪಕ್ಷೇತರ)
ನಾಗರಾಜ್ ನಾಯ್ಕ ( ರಾಷ್ಟ್ರೀಯ ಸಮಾಜ ಪಕ್ಷ)
ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು
ಸುಧಾಕರ ಜೋಗಳೇಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ