ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಂಡಿಸಿದ ೨೦೧೯-೨೦ ನೇ ಸಾಲಿನ ಕರ್ನಾಟಕ ಮುಂಗಡ ಪತ್ರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಆಶಾದಾಯಕವಲ್ಲದಿದ್ದರೂ ನಿರಾಶದಾಯಕವಾಗಿಲ್ಲ ಎಂದು ಕಾಸಿಯಾ ಅಧ್ಯಕ್ಷ ಬಸವರಾಜ ಎಸ್. ಜವಳಿ ತಿಳಿಸಿದ್ದಾರೆ.
ಕಾಸಿಯಾ ವತಿಯಿಂದ ನೀಡಲಾದ ಬಜೆಟ್ ಪೂರ್ವಭಾವಿ ನಿವೇದನೆಗಳಿಗೆ ಮುಖ್ಯಮಂತ್ರಿಯವರು ಸ್ಪಂದಿಸದಿರುವುದು ಆತಂಕ ಮೂಡಿಸಿದೆ. ಎಂಎಸ್‌ಎಂಇ ರಾಜ್ಯದ ಆರ್ಥಿಕ ಬೆಳವಣಿಗೆಯ ಅಭಿವೃದ್ಧಿಗೆ ಒತ್ತು ನೀಡುವುದರ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆಯ ವಲಯವಾಗಿದೆ. ಕೃಷಿ ವಲಯದ ಚಟುವಟಿಕೆಗಳಲ್ಲಿ ರೈತರ ಸಹಭಾಗಿತ್ವಕ್ಕೆ ಹೆಚ್ಚು ಒತ್ತು ನೀಡಿ ಸಮಗ್ರ ವ್ಯವಸಾಯದ ಅಭಿವೃದ್ಧಿಗೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಿರುವುದು ಸಮಂಜಸವಾಗಿದೆ ಎಂದು ಜವಳಿ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ೨ನೇ ಮುಂಗಡ ಪತ್ರದಲ್ಲಿ ತಿಳಿಸಿರುವಂತೆ ಕರ್ನಾಟಕದ ಸಣ್ಣ ಕೈಗಾರಿಕೋದ್ಯಮದ ಬೆಳವಣಿಗೆಯ ಹಿತದೃಷ್ಟಿಯಿಂದ ರಾಜ್ಯದ ವಿಮಾನ ನಿಲ್ದಾಣಗಳ ಮೂಲಭೂತ ಸೌಲಭ್ಯಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಿ ೨೦೧೯-೨೦೨೦ರಲ್ಲಿ ಬೀದರ್ ನಾಗರಿಕ ವಿಮಾನ ನಿಲ್ದಾಣ ಕಾರ್ಯಾಚರಣೆ ಪ್ರಾರಂಭಿಸಲು ಕ್ರಮ, ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಅಭಿವೃದ್ಧಿಗೆ ೩೨ ಕೋಟಿ ರೂ. ಅನುದಾನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಏರ್‌ಸ್ಟ್ರಿಪ್ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಹಾಗೂ ಹಾಸನ ವಿಮಾನ ನಿಲ್ದಾಣದ ಅಭಿವೃದ್ದಿ, ತುಮಕೂರು ಜಿಲ್ಲೆಯ ವಸಂತ ನರಸಾಪುರದ ೯,೬೨೯ ಎಕರೆ ಪ್ರದೇಶದಲ್ಲಿ ಚೆನ್ನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯಡಿ ತುಮಕೂರು ಕೈಗಾರಿಕಾ ನೋಡ್ ಅಭಿವೃದ್ದಿಗೆ ಕ್ರಮಗಳಿಂದಾಗಿ ೫೦ ಸಾವಿರ ಕೋಟಿ ರೂ. ವರೆಗೆ ಬಂಡವಾಳ ಹೂಡಿಕೆ, ೨ ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಲ್ಲಿ ಎದುರಾಗುವ ತೊಂದರೆ ನಿವಾರಣೆಗೆ ಎಂಎಸ್‌ಎಂಇ – ಸಾರ್ಥಕ್ ಯೋಜನೆ ಜಾರಿಗೆ ೫ ಕೋಟಿ ರೂ. ಅನುದಾನ, ಕೈಗಾರಿಕಾ ಶೆಡ್‌ಗಳನ್ನು ಅಭಿವೃದ್ದಿಪಡಿಸಲು ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹಧನ ನೀಡಲು ೫೦ ಕೋಟಿ ರೂ. ಅನುದಾನ, ಮಂಡ್ಯ ಜಿಲ್ಲೆಯ ಸಮಗ್ರ ಕೈಗಾರಿಕಾ ಅಭಿವೃದ್ದಿಯ ಹಾಗೂ ಜಿಲ್ಲೆಯ ಸುತ್ತಮುತ್ತ ಉದ್ಯೋಗವಕಾಶ ಸೃಷ್ಟಿಸಲು ೫೦ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ, ಸೀವಿಂಗ್ ಮೆಷಿನ್ ಅಪರೇಟರ್ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಖರೀದಿಗೆ ಶೇ.೫೦ರಷ್ಟು ಸಹಾಯಧನ ನೀಡಲು ೨ ಕೋಟಿ ರೂ. ಅನುದಾನ ನೀಡಿದ ಕ್ರಮಗಳು ಸಮಂಜಸವಾಗಿವೆ ಎಂದು ಅವರು ಹೇಳಿದ್ದಾರೆ.
೨೦೧೯-೨೦೨೦ ರ ರಾಜ್ಯ ಬಜೆಟ್ ಕುರಿತಂತೆ ಕಾಸಿಯಾ ಮಾಡಿದ ಮನವಿಗಳನ್ನು ಪುರಸ್ಕರಿಸುವುದರಿಂದ ರಾಜ್ಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಉಂಟಾಗುತ್ತದೆ ಎಂದು ಬಸವರಾಜ ಜವಳಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ