ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕರ್ನಾಟಕ ಸರಕಾರವು ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರಕಾರವು ತಿರಸ್ಕರಿಸಿರುವುದು ವಿವೇಚನಾ ರಹಿತ ಕ್ರಮವಾಗಿದೆ. ಸಮಸ್ತ ಲಿಂಗಾಯತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಸಂವಿಧಾನ ವಿರೋಧಿ ಕ್ರಮ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದ್ದಾರೆ.
ಲಿಂಗಾಯತರು ತಮ್ಮ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಳುತ್ತಿರುವುದು ಯಾವುದೇ ಭಿಕ್ಷೆಯಲ್ಲ, ಅದು ಲಿಂಗಾಯತರ ಸಂವಿಧಾನ ಬದ್ಧವಾದ ಹಕ್ಕು. ಕೇಂದ್ರ ಸರಕಾರವು ಈ ಧರ್ಮಕ್ಕೆ ಮಾನ್ಯತೆಯನ್ನು ನೀಡುವ ಮೂಲಕ ಕೋಟ್ಯಂತರ ಲಿಂಗಾಯತರ ಭಾವನೆಗಳನ್ನು ಗೌರವಿಸಬೇಕಾಗಿತ್ತು. ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದಿರುವ ಹೋರಾಟವು ಜೈನ, ಬೌದ್ಧ, ಸಿಖ್ಖ ಧರ್ಮೀಯರಂತೆ ಲಿಂಗಾಯತರ ಅಸ್ಮಿತೆಯ ಹೋರಾಟವಾಗಿದೆ. ಭಾರತದ ಪ್ರಪ್ರಥಮ ವಿಚಾರವಾದಿ ಎನಿಸಿದ ಜಗತ್ತಿಗೆ ಮೊಟ್ಟ ಮೊದಲ ಪಾರ್ಲಿಮೆಂಟ್‌ನ್ನು ಪರಿಚಯಿಸಿದ ಮಹಾಮಾನವತಾವಾದಿ ಬಸವಣ್ಣನವರನ್ನು ಕುರಿತು ಸಾಕಷ್ಟು ಅಧ್ಯಯನ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿದೆ. ಲಿಂಗಾಯತ ಧರ್ಮವು ತಾತ್ವಿಕವಾಗಿ ಸಾಮಾಜಿಕವಾಗಿ ಹಿಂದು ಧರ್ಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಬರುವ ಚುನಾವಣೆಯಲ್ಲಿ ಕೇಂದ್ರ ಸರ್ಕಾರವು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ