Latest

ಕೇಂದ್ರ ಸರ್ಕಾರದ ಅಧಿಸೂಚನೆ ಬಳಿಕ ಆಲಮಟ್ಟಿ ಜಲಾಶಯದ ಎತ್ತರ 524 ಮೀ.ಗೆ ಏರಿಕೆ : ಡಿ.ಕೆ.ಶಿವಕುಮಾರ್



    ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ಕೃಷ್ಣಾ ನದಿ ಜಲ ವ್ಯಾಜ್ಯಗಳ ನ್ಯಾಯಾಧೀಕರಣದ ಎರಡನೇ ಐ-ತೀರ್ಪಿನ ಅನ್ವಯ ಬಿ. ಸ್ಕೀಮ್‌ನಡಿ ರಾಜ್ಯಕ್ಕೆ ೧೩೦ ಟಿಎಂಸಿ ನೀರಿನ ಹಂಚಿಕೆಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಈ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆಯನ್ನು ಆರ್.ಎಲ್. ೫೧೯.೬೦ ಮೀ ನಿಂದ ೫೨೪.೨೫೬ ಮೀ ಹೆಚ್ಚಿಸಲಾಗುವುದು. ನ್ಯಾಯಾಧೀಕರಣದ ಅಂತಿಮ ಐತೀರ್ಪಿನ ಕುರಿತು ಕೇಂದ್ರ ಸರ್ಕಾರ ಹೊರಡಿಸುವ ಅಧಿಸೂಚನೆಯ ವ್ಯಾಪ್ತಿಗೊಳಪಡುವುದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಇಂದು ಸದಸ್ಯರಾದ ಹಣಮಂತ ನಿರಾಣಿ ಹಾಗೂ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ರ ಅನುಷ್ಠಾನದಲ್ಲಿ ೨೦ ಗ್ರಾಮಗಳು, ಬಾಗಲಕೋಟೆ ಪಟ್ಟಣದ ೧೦ ವಾರ್ಡುಗಳಲ್ಲಿನ ೨೩೨೬ ಕಟ್ಟಡಗಳು ಸ್ಥಳಾಂತರಗೊಳ್ಳುತ್ತವೆ. ಇದರಲ್ಲಿ ೨೦ ಗ್ರಾಮಗಳ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಜಮೀನು ಆಯ್ಕೆ ಮಾಡಿ, ೪೯೦೮ ಎಕರೆ ಕ್ಷೇತ್ರಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ೧೧ ಗ್ರಾಮಗಳ ಪುನರ್ವಸತಿ ಕೇಂದ್ರಕ್ಕೆ ೨೧೦೭ ಎಕರೆಗೆ ಅನುಚ್ಚೇಧ ೧೯(೧) ರಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, ೧೭೭೦ ಎಕರೆಗೆ ಐ-ತೀರ್ಪು ಮಾಡಲಾಗಿದೆ. ಪರಿಹಾರಧನ ಪಾವತಿಸಲಾಗುತ್ತಿದೆ. ಬಾಗಲಕೋಟೆ ನಗರ ಪ್ರದೇಶದ ೧೬೪೦ ಎಕರೆ ೨೦ ಗುಂಟೆ ವಿಸ್ತೀರ್ಣದ ಭೂ-ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ೧೨೪೫ ಎಕರೆ ಕ್ಷೇತ್ರಕ್ಕೆ ಐತೀರ್ಪು ಘೋಷಿಸಿ, ಪರಹಾರಧನ ಪಾವತಿಸಲಾಗಿದೆ. ಒಟ್ಟು ೩೦೧೫ ಎಕರೆ ಕ್ಷೇತ್ರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಯೋಜನೆಯ ಒಟ್ಟು ಅನುಷ್ಠಾನಕ್ಕೆ ೧,೩೩,೮೬೭ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಅಕ್ಟೋಬರ್ ೨೦೧೮ ರವರೆಗೆ ೧೪,೭೫೬ ಎಕರೆ ಜಮೀನು ಸ್ವಾಧೀನಪಡಿಸಲಾಗಿದೆ. ಮಾರ್ಗಸೂಚಿ ದರಗಳನ್ನು ಆಧರಿಸಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಗ್ರಾಮೀಣ ಪ್ರದೇಶದಲ್ಲಿ ಮಾರ್ಗಸೂಚಿಯ ನಾಲ್ಕು ಪಟ್ಟು, ನಗರ ಪ್ರದೇಶದಲ್ಲಿ ಮಾರ್ಗಸೂಚಿಯ ಎರಡು ಪಟ್ಟು ಪರಿಹಾರವನ್ನು ನಿಗದಿಪಡಿಸಲಾಗಿದೆ.
ಕೃಷ್ಣಾ ಬಿ.ಸ್ಕೀಮ್ ಕ್ರಿಯಾ ಯೋಜನೆ ಸಿದ್ಧ; ಕೃಷ್ಣಾ ಬಿ.ಸ್ಕೀಮ್‌ನಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ, ತುಂಗಾ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-೩ ಕ್ಕಾಗಿ ಒಟ್ಟು ೭೨,೬೫೨. ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಲಾಗಿದೆ. ಯೋಜನಾ ವೆಚ್ಚಕ್ಕೆ ಅನುಗುಣವಾಗಿ ಪ್ರತಿ ವರ್ಷ ಅನುದಾನ ಕಾಯ್ದಿರಿಸಲಾಗುತ್ತಿದೆ. ಈವರೆಗೆ ೧೬,೬೨೨.೬೫ ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಯೋಜನೆಯಿಂದ ಒಟ್ಟು ೮,೦೭,೩೯೧ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಸಚಿವ ಡಿ. ಕೆ. ಶಿವಕುಮಾರ್ ಅವರು
ಸದನಕ್ಕೆ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button