Latest

ಚಾಮುಂಡಿ ಬೆಟ್ಟ ದೇವಾಲಯದ ಸಿಬ್ಬಂದಿಗೆ ಹೊಸ ವೇತನ ಭರವಸೆ

 

ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ, ಬೆಳಗಾವಿ
ಮೈಸೂರಿನ ಚಾಮುಂಡಿ ಬೆಟ್ಟದ ದೇವಾಲಯದಲ್ಲಿ ಕರ್ತವ್ಯದಲ್ಲಿರುವ ಅರ್ಚಕರು ಹಾಗೂ ದೇವಸ್ಥಾನದ ಇತರೆ ಸಿಬ್ಬಂದಿಗೆ ಈಗಾಗಲೇ ೫ನೇ ವೇತನ ಆಯೋಗ ಜಾರಿಗೊಳಿಸಿದ್ದು ಬಾಕಿಯಿರುವ ೭೬ ಸಿಬ್ಬಂದಿಗೂ ನಿಯಮಾನುಸಾರ ವೇತನ ಏರಿಸಲು ಕ್ರಮ ವಹಿಸುವುದಾಗಿ ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ವಿಧಾನಸಭೆಯಲ್ಲಿ ಇಂದು ಹೇಳಿದರು.
ವಿಧಾನಸಭೆ ಶೂನ್ಯವೇಳೆಯಲ್ಲಿ ಶಾಸಕ ರಾಮದಾಸ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಅರ್ಚಕರು ಹಾಗೂ ಇತರೆ ಸಿಬ್ಬಂದಿ ಸೇರಿ ೧೭೧ ನೌಕರರಿದ್ದು ಈಗಾಗಲೇ ೫ನೇ ವೇತನ ಆಯೋಗದ ಶಿಫಾಸಿನಂತೆ ವೇತನ ನೀಡಲಾಗುತ್ತಿದ್ದು. ಬಾಕಿ ಇರುವ ಸಿಬ್ಬಂದಿಗೆ ಈ ಯೋಜನೆ ವಿಸ್ತರಿಸುವ ಸಂಬಂಧ ಮುಜರಾಯಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು ಈ ಸಮಿತಿಯ ವರದಿ ಆಧರಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ಎಲ್ಲ ದೇವಾಲಯಗಳಿಗೂ ಅನ್ವಯಿಸುವಂತೆ ದೇವಾಲಯ ನೌಕರರ ವೇತನ ಒಟ್ಟು ಆದಾಯದ ಶೇ.೩೫ರಷ್ಟಿರಬೇಕೆಂಬ ನಿಯಮವಿದೆ. ಈ ನಿಯಮದ ಆಧಾರದಲ್ಲಿ ಸೂಕ್ತ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು. ಅಲ್ಲದೆ ಈ ವಿಚಾರವಾಗಿ ದೇವಾಲಯದ ಭಕ್ತರಿಗೆ ಯಾವುದೇ ತೊಂದರೆಯಾಗಿಲ್ಲ ಎಂದೂ ಅವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button