Latest

ಜೋಯಿಡಾದ ಕಾಡುಮನೆ ಹೋಂ ಸ್ಟೇಗೆ ಪ್ರತಿಷ್ಠಿತ ‘ಔಟ್ ಲುಕ್ ಇಂಡಿಯಾ ಗೋಲ್ಡ್ ವಿನ್ನರ್’ ಪ್ರಶಸ್ತಿ

  ಪ್ರಗತಿವಾಹಿನಿ ಸುದ್ದಿ, ನವದೆಹಲಿ/ದಾಂಡೇಲಿ
ದೇಶದ ಅತ್ಯುತ್ತಮ ಪ್ರವಾಸೋದ್ಯಮಕ್ಕಾಗಿ ಕೊಡಮಾಡುವ ಪ್ರತಿಷ್ಟಿತ ಔಟ್ ಲುಕ್ ಇಂಡಿಯಾ ಗೋಲ್ಡ್ ವಿನ್ನರ್ ಪುರಸ್ಕಾರಕ್ಕೆ ಕರ್ನಾಟಕದ ಜೋಯಿಡಾದ ಕಾಡುಮನೆ ಹೋಂ ಸ್ಟೇ ಆಯ್ಕೆಯಾಗಿದೆ.
ಲಂಡನ್ ಮೂಲದ ಜಾಗತಿಕ ಪ್ರವಾಸೋದ್ಯಮ ಸಂಸ್ಥೆ WTM ಭಾರತದಲ್ಲಿ ಔಟ್ ಲುಕ್ ಇಂಡಿಯಾ ಸಹಭಾಗಿತ್ಬದಲ್ಲಿ ಘೋಷಿಸುವ ‘ಜವಾಬ್ದಾರಿಯುತ ಪ್ರವಾಸೋದ್ಯಮ ಪುರಸ್ಕಾರ’,(IRT) ಪ್ರಶಸ್ತಿಗಾಗಿ ಅಂತಿಮ ಸುತ್ತಿನಲ್ಲಿ ದೇಶಮಟ್ಟದ ಐದು ಅತ್ಯುತ್ತಮ ಪ್ರವಾಸೋದ್ಯಮ ಸಂಸ್ಥೆಗಳನ್ನು ಪರಿಗಣಿಸಲಾಗಿತ್ತು. ಅದರಲ್ಲಿ ಕರ್ನಾಟಕದ ಕಾಡುಮನೆ ಹೋಂ ಸ್ಟೇಯನ್ನು ಈ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು.
ಪ್ರಶಸ್ತಿ ಆಯ್ಕೆ ಸಮಿತಿಯ ನಿರ್ಣಾಯಕರಲ್ಲೊಬ್ಬರೂ, ವನ್ಯಜೀವಿ ಸಂರಕ್ಷಣಾ ಸೊಸೈಟಿಯ ಕಾರ್ಯಕಾರಿ ನಿರ್ದೇಶಕರೂ ಆಗಿರುವ ಬೆಲಿಂಡಾ ರೈಟ್ ಅವರು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕಾಡುಮನೆಯ ನರಸಿಂಹ ಭಟ್ ಛಾಪಖಂಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
2004ರಲ್ಲಿ ಲಂಡನ್ ನಲ್ಲಿ ಆರಂಭವಾದ WTM ಸಂಸ್ಥೆ ಭಾರತ, ಐರ್ಲೆಂಡ್, ಆಫ್ರಿಕಾ ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕಠಿಣ ಮಾನದಂಡಗಳಿಂದ ಕೂಡಿದ್ದು ತಿಂಗಳಾನುಗಟ್ಟಲೆಯ ಶೋಧನೆ, ಕೂಲಂಕುಷ ವಿಚಾರಣೆ, ಅನಿರೀಕ್ಷಿತ ಮತ್ತು ಗೌಪ್ಯ ಮೌಲ್ಯಮಾಪನ ಭೇಟಿ ಮುಂತಾದ ಉಪಕ್ರಮಗಳ ಮೂಲಕ ಪಾರದರ್ಶಕತೆಯಿಂದ ಅರ್ಹ ಸಂಸ್ಥೆಗಳನ್ನು ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಈ ವರ್ಷದ ಪ್ರಶಸ್ತಿ ಆಯ್ಕೆಯಲ್ಲಿ ಆರಂಭಿಕ ಹಂತದಲ್ಲಿ ದೇಶಮಟ್ಟದಲ್ಲಿ 200   ಸಂಸ್ಥೆಗಳನ್ನು ಆಯ್ದುಕೊಳ್ಳಲಾಗಿತ್ತು. ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಗೆ ಕರ್ನಾಟಕದ ಕಾಡುಮನೆ, ಒಡಿಶಾದ ಮಂಗಲಜೋಡಿ ಇಕೊ ಟೂರಿಸಂ ಟ್ರಸ್ಟ್, ಕೇರಳದ ಶೋಲಾ ಶಾಕ್, ಮಹಾರಾಷ್ಟ್ರದ ದ ಬಾಂಬೂ ಫಾರೆಸ್ಟ್, ಟೈಗ್ರೆಸ್@ಘೋಶ್ರಿ ಆಯ್ಕೆಯಾಗಿದ್ದವು. ಇವುಗಳಲ್ಲಿ ಅಂತಿಮವಾಗಿ ಕಾಡುಮನೆ ಹೋಂ ಸ್ಟೇ ಆಯ್ಕೆಗೊಂಡಿತು.
 ಈ ವರ್ಷದ ಆಯ್ಕೆ ಪ್ರಕ್ರಿಯೆ ನಿಜವಾಗಿಯೂ ಸವಾಲಿನಿಂದ ಕೂಡಿತ್ತು, ಎಂದು ನಿರ್ಣಾಯಕ ಮಂಡಳಿಯ ಅಧ್ಯಕ್ಷ ಹಾಗೂ ಮ್ಯಾಂಚೆಸ್ಟರ್‌ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕ ಡಾ.ಹೆರಾಲ್ಡ್ ಗುಡ್ವಿನ್ ಹೇಳಿದರು.

ಕಾಡುಮನೆ ಹೋಂ ಸ್ಟೇ ಕುರಿತು

2007ರಲ್ಲಿ ಮೂರು ಎಕರೆ ಜಾಗದಲ್ಲಿ ಆರಂಭವಾದ ಕಾಡುಮನೆ ಹೋಂ ಸ್ಟೇ ಇವತ್ತು 109 ಜಾತಿಯ ಹಣ್ಣಿನ ಮರ ಗಿಡಗಳು, 19 ಜಾತಿಯ ಲಿಂಬು, 46 ಜಾತಿಯ ಬಿದಿರು ತಳಿಗಳಷ್ಟೇ ಅಲ್ಲದೇ ಹಲವಾರು ಔಷಧೀಯ ಸಸ್ಯಗಳಿಂದ ಕೂಡಿದ್ದು ಹೆಸರಿಗೆ ಅನ್ವರ್ಥಕವಾಗಿ ಕಾಡುಮನೆಯೇ ಆಗಿದೆ. 63 ವಿವಿಧ ಜಾತಿಯ ಪಕ್ಷಿಗಳನ್ನು ಈ ಪರ್ಯಾವರಣದಲ್ಲಿ ಕಾಣಬಹುದಾಗಿದೆ. ಇದಲ್ಲದೇ ಕಾಡುಮನೆ ಇಕೊ ಫೌಂಡೇಶನ್ ವತಿಯಿಂದ ಜೇನು ಸಾಕಣೆ, ಪ್ರದರ್ಶನ, ಪ್ರಾತ್ಯಕ್ಷಿಕೆ, ತರಬೇತಿ ಮತ್ತು ಮಾರಾಟ ಎಲ್ಲವನ್ನೂ ಒಂದೇ ಸೂರಿನಡಿಯಲ್ಲಿ ನೀಡುವ ಹನಿಪಾರ್ಕ್ ಎಂಬ ವಿಶೇಷ ಜೇನುವಲಯವನ್ನು ಮತ್ತು ಪರಿಶುದ್ಧ ನೈಸರ್ಗಿಕ ಉತ್ಪನ್ನಗಳ ಮಾರಾಟಕ್ಕಾಗಿ ಕಾಡುಮನೆ ಇಕೊ ಶಾಪ್ ಸ್ಥಾಪಿಸಿ ಗ್ರಾಮೀಣ ಜನರಿಗೆ, ರೈತರಿಗೆ ಉದ್ಯೋಗ, ಆರ್ಥಿಕ ಸ್ವಾವಲಂಬನೆಯ ಅವಕಾಶಕ್ಕೂ ಕಾರಣವಾಗಿದೆ. ಕರ್ನಾಟಕದ ಪ್ರವಾಸೋದ್ಯಮ ವಲಯದಲ್ಲಿ ಗೋಲ್ಡ್ ಕ್ಲಾಸ್ ಹೋಂ ಸ್ಟೇ ಯಾಗಿ ಗುರುತಿಸಲ್ಪಟ್ಟಿರುವ ಈ ಸಂಸ್ಥೆಗೆ 2018ರಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕಾರ್ಲ್ ಜಾಯ್ಸ್ ಅತ್ಯುತ್ತಮ ವನ್ಯಜೀವಿ ಸಂರಕ್ಷಣಾ ಪುರಸ್ಕಾರ ನೀಡಿ ಗುರುತಿಸಲಾಗಿದೆ.
ಕಾಡುಮನೆಯ ರೂವಾರಿ ನರಸಿಂಹ ಭಟ್ ಛಾಪಖಂಡ ವನ್ಯಜೀವಿ, ಪರಿಸರ, ಕೃಷಿ, ಪ್ರವಾಸೋದ್ಯಮ ವಲಯಗಳಲ್ಲಿ ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದ ತೊಡಗಿಸಿಕೊಂಡಿರುವ ಯುವ ಉದ್ಯಮಿಯಾಗಿದ್ದಾರೆ. ಇವರು ಈವರೆಗೂ ಸುಮಾರು ೨೦,೦೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ, ಸಂರಕ್ಷಣೆಯ ಕುರಿತು ತರಬೇತಿಗಳನ್ನು ನೀಡಿದ್ದಾರಲ್ಲದೆ ಸುಮಾರು ೫೦೦ ಕ್ಕೂ ಹೆಚ್ಚು ಬೀದಿನಾಟಕ ಪ್ರದರ್ಶನಗಳ ಮೂಲಕ ಪರಿಸರ ಸಂರಕ್ಷಣೆ, ಜನಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ನರಸಿಂಹ ಭಟ್ ಅವರ ಸಂಪರ್ಕ ಸಂಖ್ಯೆ -9480085707
ಪ್ರಶಸ್ತಿ ಸಿಕ್ಕಿರುವುದು ನನಗೆ ಅಚ್ಛರಿ ಮತ್ತು ಖುಷಿ ತಂದಿದೆ. ನಿರ್ಣಾಯಕರ ತಂಡ ನಮ್ಮ ಹೋಂ ಸ್ಟೇ ಗೆ ಅತಿಥಿಗಳಂತೆ ಬಂದು ಹೋಗಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇಂತಹ ಒಂದು ಪ್ರಶಸ್ತಿ ಇದೆ  ಎನ್ನುವುದೇ ನನಗೆ ಗೊತ್ತಿರಲಿಲ್ಲ. ಇಂತಹ ಪರಿಸರ ಪೂರಕ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಬೇಕಿದೆ, ಸಾಹಸಿಗರು ಮುಂದೆ ಬರಬೇಕಿದೆ.
-ನರಸಿಂಹ ಭಟ್, ಛಾಪಖಂಡ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button