ಪ್ರಗತಿವಾಹಿನಿ ಸುದ್ದಿ, ಮಂಗಳೂರು:
ಸಂಸದ ನಳೀನ್ ಕುಮಾರ ಕಟೀಲು ಮಾಡಿದ ಟ್ವೀಟ್ ಒಂದು ಕಾಂಗ್ರೆಸ್ಸಿಗರನ್ನು ಕೆರಳಿಸಿದ್ದು, ಟ್ವಿಟರ್ ವಾಲ್ ನಲ್ಲಿ ಬೆಂಕಿ ಹಚ್ಚಿದೆ.
‘ನಾಥೂರಾಮ್ ಗೋಡ್ಸೆಗಿಂತ ರಾಜೀವ್ ಗಾಂಧಿ ಮಹಾಕ್ರೂರಿ, ಗೋಡ್ಸೆ ಒಬ್ಬನನ್ನು ಕೊಂದಿದ್ದರೆ, ರಾಜೀವ ಗಾಂಧಿ 17 ಸಾವಿರ ಜನರನ್ನು ಕೊಂದಿದ್ದಾರೆ’ ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? ಎಂದು ನಿಳಿನ್ ಕುಮಾರ್ ಪ್ರಶ್ನಿಸಿದ್ದಾರೆ.
ನಳೀನ್ ಟ್ವೀಟ್ ಕಾಂಗ್ರೆಸ್ಸಿಗರನ್ನು ಕೆರಳಿಸಿದ್ದು, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ಇಂತಹ ಅಸಂಬದ್ಧ ಟ್ವೀಟ್ ಮಾಡಬೇಡಿ ಎಂದು ತಿರುಗುತ್ತರ ನೀಡಿದ್ದಾರೆ.
ರಾಷ್ಟ್ರಪಿತನ ಹತ್ಯೆ ಮಾಡಿದ ನರಹಂತಕನನ್ನು ಸಮರ್ಥಿಸಿಕೊಳ್ಳುವ ನೀನು ನಿಜವಾದ ದೇಶದ್ರೋಹಿ. ನಿನ್ನಂತಹ ನಾಲಾಯಕ್ ಕ್ರಿಮಿ ಸಂಸದನಾಗಲು ಮಹಾತ್ಮ ಗಾಂಧೀಜಿ ಮಾಡಿದ ಹೋರಾಟ ಕಾರಣ ಎಂದು ಸೂರ್ಯ ಮುಕುಂದರಾಜ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ಇವೆಲ್ಲ ನಾನ್ಸೆನ್ಸ್ ಬಿಡಿ, ಮೊದಲು ಪಂಪ್ವೇಲ್ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಿ ಎಂದಿದ್ದಾರೆ ಮತ್ತೊಬ್ಬರು.
ನೀವು ಒಬ್ಬ ಕ್ರೂರಿನೇ ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚಲು ಹೊರಟವರು, ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿ ಮಾಡಿ ಅಶಾಂತಿಯನ್ನು ಮೂಡಿಸಿದ್ದೀರಿ ನೀವೇ ಮಾಹಾನ್ ಕ್ರೂರಿ ಎಂದು ಮತ್ತೊಬ್ಬರು ಪ್ರತಿಕ್ರಿಯಸಿದ್ದಾರೆ.
ದೇಶದ 130 ಕೋಟಿ ಜನರನ್ನು ತಮ್ಮ ಸುಳ್ಳುಗಳಿಂದ ಹತ್ಯೆ ಮಾಡಿದ ಮೋದಿ ನಿಜವಾದ ಕ್ರೂರಿ…ಗೋದ್ರಾ ಹತ್ಯಾಕಾಂಡ ನೆನಪಿಲ್ವಾ ನಿಮಗೆ…ಬಾಪೂನ ಹತ್ಯೆ ಮಾಡಿದವನು ನಿಮಗೆ ದೇವರು ಬಾಪೂವಿನ ಹತ್ಯೆ ಅವರೊಬ್ಬರ ಹತ್ಯೆಯಲ್ಲಾ ಎಲ್ಲಾ ಭಾರತೀಯರ ಹತ್ಯೆ ಎಂದು ಸಾರ್ವಜನಿಕರೊಬ್ಬರು ಹೇಳಿದ್ದಾರೆ.
ಹಿಂದೂ ಧರ್ಮದ ಗುತ್ತಿಗೆಯನ್ನು ನಿಮಗೆ ನೀಡಿದವರು ಯಾರು? ಹಿಂದೂ ಹೆಸರಿನಲ್ಲಿ ನಮ್ಮ ಹುಡುಗರ ತಲೆ ಕೆಡಿಸಿ ಅವರಿಂದ ದುಷ್ಕೃತ್ಯ ಮಾಡಿಸುವ ನೀವು ಜೈಲು ಸೇರಿರುವ ಆ ಹುಡುಗರ ಕುಟುಂಬಕ್ಕೆ ಏನನ್ನು ಮಾಡಿದ್ದೀರಿ? ಎಂದು ಕುಂದಾಪುರ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.
ಆದರೆ, ಇಷ್ಟೆಲ್ಲ ಪ್ರತಿಕ್ರಿಯೆ ನಂತರ ಸಧ್ಯಕ್ಕೆ ನಳೀನ್ ಕುಮಾರ ಟ್ವೀಟ್ ಟ್ವಿಟರ್ ವಾಲ್ ನಿಂದ ಮಾಯವಾಗಿದೆ. ಈ ಕುರಿತು ಪ್ರಗತಿವಾಹಿನಿ ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ