*ಇಂದಿನಿಂದ ಚಳಿಗಾಲದ ಅಧಿವೇಶನ: ಆಡಳಿತ ಪಕ್ಷ ಮಣಿಸಲು ಪ್ರತಿಪಕ್ಷಗಳು ಸಜ್ಜು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದಿನಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು ಆಡಳಿತ ಪಕ್ಷವನ್ನು ಕಟ್ಟಿಹಾಕಲು ವಿಪಕ್ಷಗಳು ಸಜ್ಜಾಗಿವೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ ದಿನ ಗಣ್ಯರಿಗೆ ಸಂತಾಪ ಸೂಚಿಸಲಿದ್ದಾರೆ. ಬಳಿಕ ಬಿಜೆಪಿ ಮೊದಲ ದಿನವೇ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಗೆ ನಿಲುವಳಿ ಮಂಡಿಸಲು ಸಜ್ಜಾಗಿದೆ.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈ ಎಲ್ಲದರ ಬಗ್ಗೆ ಧ್ವನಿ ಎತ್ತಲು ವಿಪಕ್ಷ ಮುಂದಾಗಿದೆ. ಅಲ್ಲದೇ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಮೊದಲ ದಿನವೇ ಹೋರಾಟ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.
ಮೆಕ್ಕೆಜೋಳ ಮತ್ತು ಕಬ್ಬಿಗೆ ಬೆಂಬಲ ಬೆಲೆ, ಖರೀದಿ ಕೇಂದ್ರಗಳ ತೆರೆಯುವುದು, ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಸಮಸ್ಯೆ ಇವುಗಳನ್ನು ಅಧಿವೇಶನದಲ್ಲಿ ಗಟ್ಟಿಯಾಗಿ ಪ್ರಸ್ತಾಪಿಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಇನ್ನು ನಾಳೆ ಸುಮಾರು 20 ಸಾವಿರ ರೈತರನ್ನು ಸೇರಿಸಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತಯಾರಿ ನಡೆಸುತ್ತಿದೆ.
ಕಾನೂನು ಸುವ್ಯವಸ್ಥೆ ವಿಷಯ ಚಿಂತನೆ ಬಗ್ಗೆ ಚರ್ಚೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಪ್ರಸ್ತಾಪ, ಪೊಲೀಸರ ಮೇಲೆ ಜೈಲಿನಲ್ಲಿನ ಕೈದಿಗಳ ಹಲ್ಲೆ, ವಿಪಕ್ಷಗಳ ಶಾಸಕರ ಅನುದಾನದ ಚರ್ಚೆ, ಇನ್ನು ಇತ್ತ ಮೆಕ್ಕೆಜೋಳ ಬೆಲೆ ನಿಗದಿಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಆರೋಪವನ್ನು ಬಿಜೆಪಿ ಮುಂದಿಟ್ಟು, ಕಬ್ಬು ಬೆಳೆ ಸಂಬಂಧಿತ ವಿಷಯಗಳಲ್ಲಿಯೂ ಕೇಂದ್ರದ ವಿರುದ್ಧ ಪ್ರಶ್ನೆ ಎತ್ತಲು ಕಾಂಗ್ರೆಸ್ ತಯಾರಿ ನಡೆಸಿದೆ.
ಜೊತೆಗೆ, ಕಬ್ಬು ಮತ್ತು ಮೆಕ್ಕೆಜೋಳ ರೈತರಿಗೆ ರಾಜ್ಯ ಸರ್ಕಾರ ಸಮರ್ಪಕ ಬೆಂಬಲ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುವ ಯೋಚನೆಯೂ ಇದೆ. ಇದಲ್ಲದೆ, 1 ಲಕ್ಷ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟು ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವುದನ್ನು ಸಾಧನೆಯಾಗಿ ಮಂಡಿಸಲು ಕಾಂಗ್ರೆಸ್ ಸಜ್ಜಾಗಿದೆ.



