Latest

‘ನಿಯಂತ್ರಣ ತಪ್ಪಿದ ಮಕ್ಕಳು ಬೀದಿಗೆ ಬೀಳುತ್ತಾರೆ’

ಮಕ್ಕಳ ಜಾನಪದ ಉತ್ಸವ ಉದ್ಘಾಟನೆ
ಮಕ್ಕಳು ತಂದೆ-ತಾಯಿಗಳ ಕನಸು ನನಸಾಗಿಸುವ ಗುರಿ ಹೊಂದಬೇಕು-ಹಲಗತ್ತಿ

 

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಮಕ್ಕಳ ಮನಸ್ಸು ಚಂಚಲ. ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಂಡವರು ಮನೆಯ ಒಳಗೆ ಇದ್ದರೆ, ನಿಯಂತ್ರಣ ತಪ್ಪಿದವರು ಬೀದಿಗೆ ಬೀಳುತ್ತಾರೆ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಏನನ್ನಾದರು ಸಾಧಿಸಲು ಸಾಧ್ಯ ಎಂದು  ಮಕ್ಕಳ ಚಿಂತಕ ಶಂಕರ ಹಲಗತ್ತಿ ಹೇಳಿದರು.
 ಇಲ್ಲಿಯ ಚೈತನ್ಯ ಆಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಸ್ಥಳಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಮಕ್ಕಳ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಗ್ರಾಮೀಣ ಭಾಗದ ಮಕ್ಕಳು  ಆಂಗ್ಲಭಾಷೆಯಲ್ಲಿ ಅನುತ್ತೀರ್ಣರಾದರೆ, ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಮಾತೃ ಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗುತ್ತಿರುವುದು ವಿಪರ್ಯಾಸ. ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಸುವುದೇ ಜಾನಪದ  ಎಂದರು.
 
ಮೂಡಲಗಿ ಬಿಇಒ ಎ.ಸಿ.ಮನ್ನಿಕೇರಿ ಮಾತನಾಡಿ, ದೇವರು ಮಕ್ಕಳಲ್ಲಿ ಒಂದು ಇಚ್ಚಾಶಕ್ತಿಯನ್ನು ಕೊಟ್ಟಿರುತ್ತಾನೆ. ಆ ಇಚ್ಚಾಶಕ್ತಿಯನ್ನು ಪೋಷಿಸಿ ಬೆಳೆಸಿ ದೊಡ್ಡದಾಗಿ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚೈತನ್ಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಮ್.ಕಮದಾಳ ಮಾತನಾಡಿ, ಪುಸ್ತಕದಲ್ಲಿ ಸಿಗಲಲಾರದ ಜ್ಞಾನ ಕಲೆಗಳಲ್ಲಿ ಸಿಗುತ್ತದೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಮಕ್ಕಳ ಜಾನಪದ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಚೈತನ್ಯ ಗ್ರುಪ್ ಸಂಸ್ಥಾಪಕ ಎಸ್.ಎಸ್.ಹೊರಟ್ಟಿ ಮತ್ತು ಶಿಕ್ಷಕ ಕೆ.ಬಿ.ಸಾಯನ್ನವರ ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಯ ಎಸ್.ಬಿ.ಕ್ಯಾಸ್ತಿ, ಎಲ್.ಎಸ್.ಚೌರಿ, ಸಿ.ಆರ್.ಪೂಜೆರಿ, ವಾಯ್.ಬಿ.ಪಾಟೀಲ, ಮುಖ್ಯ ಶಿಕ್ಷಕರಾದ ಅಶೋಕ ನೇಸರಗಿ, ಸಂಧ್ಯಾ ಪಾಟೀಲ ಮತ್ತಿತರರು ಇದ್ದರು.


ಮಹಾಲಿಂಗಪುರದ ವೀರಭದ್ರಪ್ಪನ್ನವರ ಮಕ್ಕಳ ಕಲಾ ತಂಡ ಕರಡಿ ಮಜಲು ಮತ್ತು ಸಂಬಾಳ ವಾದ್ಯ ಕಲಾ ಪ್ರದರ್ಶನ ನೀಡಿತು.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button