ಪ್ರಗತಿವಾಹಿನಿ ಸುದ್ದಿ, ಮೂಡಲಗಿ
ನೆಲ, ಜಲ, ಭಾಷೆಗೆ ಬೇರೆಯವರಿಂದ ಅನ್ಯಾಯವಾಗದಂತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬ ನಾಗರಿಕ ಆದ್ಯ ಕರ್ತವ್ಯವಾಗಿದೆ ಎಂದು ತಹಶೀಲ್ದಾರ ಮುರಳಿಧರ ತಳ್ಳಿಕೇರಿ ಹೇಳಿದರು.
ಪುರಸಭೆಯಿಂದ ಏರ್ಪಡಿಸಿದ್ದ ಗಣರಾಜೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದರು.
ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಡಾ: ಅಂಬೇಡ್ಕರ ಅವರು ಬರೆದ ಸಂವಿಧಾನ ಅಂಗಿಕಾರವಾದ ದಿನ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕದಿನವಾಗಿದೆ. 70 ವರ್ಷಗಳಲ್ಲಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮೂರು ಸಲ ಸಣ್ಣ ಬದಲಾವಣೆಗಳಾಗಿ ದೇಶದ ಜನತೆಗೆ ರಕ್ಷಣೆ, ಭದ್ರತೆ, ಆಶ್ರಯ ದೊರಕಿಸಿಕೊಟ್ಟಿದೆ, ವಿದ್ಯಾರ್ಥಿಗಳು ಸಂವಿಧಾನ ತಿಳಿದುಕೊಂಡು ಸುಭದ್ರ ಭಾರತದ ಬುನಾದಿಯಾಗಬೇಕು, ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಮನವರಿಕೆಯಾಗುವಂತೆ ಭೋಧಿಸಿ ಸಂವಿಧಾನವನ್ನು ಪ್ರೀತಿಸುವಂತಾಗಬೇಕು ಎಂದರು.
ಸಿಡಿಪಿಒ ಗುಜನಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್ ಸೋನವಾಲ್ಕರ, ವಿದ್ಯಾರ್ಥಿಗಳಾದ ಶಿಲ್ಪಾ ಕುಂದರಗಿ, ವಾಣಿಶ್ರೀ ಢವಳೇಶ್ವರ, ರೂಪಾ ಕಂಕಣವಾಡಿ ಮಾತನಾಡಿದರು.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಮೂಡಲಗಿ ವಲಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಒಂದು ಲಕ್ಷ ಬಹುಮಾನವನ್ನು ನೀಡುವುದಾಗಿ ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್ ಸೋನವಾಲ್ಕರ ಮತ್ತು ೬೨೫ಕ್ಕೆ ೬೨೫ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಇಪತ್ತೈದು ಸಾವಿರ ರೂ ನೀಡುವುದಾಗಿ ಎಸ್.ಎಸ್.ಆರ್ ಪ್ರೌಢ ಶಾಲೆಯ ನಿವೃತ್ತ ಉಪಪ್ರಾಚಾರ್ಯ ಆರ್.ಟಿ.ಲಂಕೆಪ್ಪನ್ನವರ ಘೋಷಿಸಿದರು.
ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಆರ್.ಡಿ.ಸಣ್ಣಕ್ಕಿ, ಶಿವಾನಂದ ಸಣ್ಣಕ್ಕಿ, ಮಾಜಿ ಸದಸ್ಯ ರಮೇಶ ಸಣ್ಣಕ್ಕಿ, ಕೆ.ಟಿ.ಗಾಣಿಗೇರ, ಉಪತಶಿಲ್ದಾರ ಎಸ್.ಎ.ಬಬಲಿ, ರಾಜು ಕಡಕೋಳ, ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಪೂಜೇರಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎ.ನಾಡಗೌಡ ಮತ್ತಿತರು ಇದ್ದರು.
ಉತ್ತರ ಪ್ರದೇಶದಲ್ಲಿ ಅಮೇಚುರ್ ಸಂಸ್ಥೆಯಿಂದ ಜರುಗಿದ ರಾಷ್ಟ್ರ ಮಟ್ಟದ ಕ್ರಾಸ್ ಕಂಟ್ರಿ ಸ್ಫರ್ಧೆಯಲ್ಲಿ ಭಾಗವಹಿಸಿದ ಇಲ್ಲಿಯ ಉಮಾಬಾಯಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೇಖಾ ಬ.ಪಿರೋಜಿಯನ್ನು ಸತ್ಕರಿಸಿದರು. ಪುರಸಭೆ ಆರೋಗ್ಯ ಹಿರಿಯ ನಿರೀಕ್ಷಕ ಚಿದಾನಂದ ಮುಗಳಖೋಡ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಕರಿಬಸವರಾಜ ಟಿ ನಿರೂಪಿಸಿದರು.
ಎಸ್.ಎಸ್.ಆರ್ ಪ್ರೌಢ ಶಾಲೆ, ಕೆ.ಎಚ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆ, ಉಮಾಬಾಯಿ ಪ್ರೌಢ ಶಾಲೆ, ಸರಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರಕಾರಿ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಪ್ರಾಥಮಿಕ ಶಾಲೆ, ವಿ.ಬಿ.ಸೋನವಾಲ್ಕರ ಪ್ರೌಢ ಶಾಲೆ, ಅಡಿವುಡಿ ಶಾಲೆ, ಎನ್.ಎನ್.ಸೋನವಾಲ್ಕರ ಶಾಲೆ, ನವಚೈತನ್ಯ ಶಾಲೆಯ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ