
ಪ್ರಗತಿವಾಹಿನಿ ಸುದ್ದಿ, ಅಗಸಗಿ :
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರಸ್ತೆ ಅಗಲಿಕರಣಕ್ಕೆ ತೊಡಕಾಗಿರುವ ಮನೆಗಳನ್ನು ಒಂದೇ ದಿನದಲ್ಲಿ ತೆರವುಗೊಳಿಸುವಂತೆ ರಾತ್ರೋರಾತ್ರಿ ಆದೇಶಿಸಿ ಸುತ್ತೋಲೆ ಹೊರಡಿಸಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಕಡೋಲಿಯ ಸುಮಾರು 50 ಕ್ಕು ಹೆಚ್ಚು ಮನೆ ಮಾಲೀಕರು ಕಂಗಾಲಾಗಿದ್ದಾರೆ.

ನೂರಾರು ವರ್ಷಗಳಿಂದ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುವ ಸ್ಥಳಗಳಿಗೆ ಅತಿಕ್ರಮಣ ಮನೆಗಳು ಎಂದು ನೋಟಿಸ್‍ನಲ್ಲಿ ನಮೂದಿಸಲಾಗಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಲೋಕೊಪಯೋಗಿ ಇಲಾಖೆ ಹೊರಡಿಸಿರುವ ಆದೇಶ ನೋಡಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮನೆ ಮಾಲೀಕರಿಗೆ ಇದೆ ಮಾರ್ಚ್ 5ರ ರಾತ್ರಿ ಗ್ರಾಮ ಪಂಚಾಯತಿ ಮೂಲಕ ನೋಟಿಸ್ ಜಾರಿಮಾಡಿ ಮಾರನೇ ದಿನವೇ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ರಾತ್ರಿ ಮಲಗುವ ಸಮಯದಲ್ಲಿ ನೀಡಿರುವ ನೋಟಿಸ್‍ನಿಂದ ಕಂಗಾಲಾಗಿರುವ ಕಡೋಲಿ ನಿವಾಸಿಗಳು ದಿಕ್ಕುಕಾಣದೆ ಕಂಗಾಲಾಗಿದ್ದಾರೆ.
ಗ್ರಾಮಸ್ಥರು ರಕ್ಷಣೆ ನೀಡುವಂತೆ ಕಾಕತಿ ಪೋಲಿಸ್ ಠಾಣೆ ಸಂಪರ್ಕಿಸಿದ್ದಾರೆ. ಆದರೆ, ಮನೆ ಕೆಡವಿದರೆ ಮತ್ತೊಂದು ಹೊಸಮನೆ ಕಟ್ಟಿ. ಅಭಿವೃದ್ಧಿ ಕಾರ್ಯಗಳು ಪದೇಪದೆ ನಡೆಯುುವುದಿಲ್ಲ ಎಂದು ಸಿಪಿಐ ಹೇಳಿ ಕಳಿಸಿದ್ದಾರೆ.
ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಅಥವಾ ರಸ್ತೆ ಅಗಲೀಕರಣದ ಸಮಯದಲ್ಲಿ ಸಂಬಂಧಿಸಿದ ಮಾಲೀಕರಿಗೆ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು ಎನ್ನುವ ಕಾನೂನು ಇದ್ದರೂ ರಾತ್ರಿ ನೋಟಿಸ್ ನೀಡಿ ಒಂದೇ ದಿನದಲ್ಲಿ ಮನೆ ಖಾಲಿ ಮಾಡಬೇಕು ಎಂದು ಲೋಕೊಪಯೋಗಿ ಇಲಾಖೆ ನೀಡಿರುವ ನೋಟಿಸ್ ಹಿಂದೆ ಯಾರಿದ್ದಾರೆ ಎನ್ನುವ ಚರ್ಚೆ ಕಡೋಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುತ್ತಿದೆ.
ಪ್ರಭಾವಿ ವ್ಯಕ್ತಿಯೊಬ್ಬರು ಅಲ್ಲಿಯೇ ಸಮೀಪ ಜಮೀನು ಖರೀದಿಸಿದ್ದಾರೆ. ಅದಕ್ಕೆ ಹೋಗಲು ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಮತ್ತು ಇತರ ಗ್ರುಪ್ ಗಳಿಗೆ ಶೇರ್ ಮಾಡಿ)