ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ ಸತತ ೨೧ ನೇ ವರ್ಷದ ಶ್ರೀ ಕೃಷ್ಣ ಜಗನ್ನಾಥ ರಥಯಾತ್ರೆ ಮಹೋತ್ಸವವು ಬೆಳಗಾವಿಯಲ್ಲಿ ಫೆ.೨ ಹಾಗೂ ೩ ರಂದು ಸಂಭ್ರಮದಿಂದ ಜರುಗಲಿದೆ ಎಂದು ಬೆಳಗಾವಿ ಇಸ್ಕಾನ್ ಅಧ್ಯಕ್ಷ ಭಕ್ತಿ ರಸಾಮೃತ ಸ್ವಾಮಿಜಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹೋತ್ಸವದ ಅಂಗವಾಗಿ ಫೆ.೨ ರಂದು ರಥಯಾತ್ರೆ ನಡೆಯಲಿದ್ದು, ಫೆ.೨, ೩ ರಂದು ಸಂಜೆ ನಗರದ ಟಿಳಕವಾಡಿಯ ಇಸ್ಕಾನ್ ದೇವಸ್ಥಾನ ಬಳಿಯ ಮೈದಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ರಥಯಾತ್ರೆ ನಡೆಯಲಿದ್ದು ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ. ಸಿಂಗರಿಸಿದ ರಥದಲ್ಲಿ ಜಗನ್ನಾಥ, ಬಲದೇವ ಹಾಗೂ ಸುಭದ್ರಾ ದೇವಿಯರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಸಾಂಪ್ರದಾಯಿಕವಾಗಿ ಶೃಂಗರಿಸಿದ ಎತ್ತಿನ ಗಾಡಿಗಳು ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿರಲಿವೆ ಎಂದು ತಿಳಿಸಿದ ಸ್ವಾಮಿಜಿ, ಮೆರವಣಿಗೆಯ ಮಾರ್ಗದುದ್ದಕ್ಕೂ ೬೦ ಸಾವಿರಕ್ಕೂ ಅಧಿಕ ಪ್ರಸಾದದ ಪೊಟ್ಟಣಗಳನ್ನು ಭಕ್ತರಿಗೆ ವಿತರಿಸಲಾಗುವುದು ಎಂದರು.
ಇಸ್ಕಾನ್ ಬಳಿಯ ಮೈದಾನದಲ್ಲಿ ವಿವಿಧ ರೀತಿಯ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಗೋಮೂತ್ರ ಹಾಗೂ ಸೆಗಣಿಯಿಂದ ತಯಾರಿಸಲಾದ ವಸ್ತುಗಳ ಮಾರಾಟ ಮಳಿಗೆ ವಿಶೇಷವಾಗಿರಲಿದೆ. ಇಸ್ಕಾನ್ ಭಕ್ತರು ಒಂದು ಗಂಟೆ ಅವಧಿಯ ನಾಟಕ ಪ್ರದರ್ಶಿಸಲಿದ್ದು, ಆಗಮಿಸುವ ಎಲ್ಲ ಭಕ್ತರಿಗೆ ಎರಡೂ ದಿನ ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಫೆ.೨ ರಂದು ಮಧ್ಯಾಹ್ನ ೧ ಗಂಟೆಗೆ ನಗರದ ಬೋಗಾರವೇಸ್ನಿಂದ ಆರಂಭವಾಗಲಿರುವ ಯಾತ್ರಾ ಮಹೋತ್ಸವದ ಮೆರವಣಿಗೆಯು ಸಮಾದೇವಿ ಗಲ್ಲಿ, ಗಣಪತಿ ಗಲ್ಲಿ, ನರಗುಂದಕರ ಭಾವೆ ಚೌಕ್, ಮಾರುತಿ ಗಲ್ಲಿ, ಕಿರ್ಲೋಸ್ಕರ ರಸ್ತೆ, ಟಿಳಕ ಚೌಕ, ರಾಮಲಿಂಗ ಖಿಂಡ್ ಗಲ್ಲಿ, ಪಾಟೀಲ ಗಲ್ಲಿ, ಕಪಿಲೇಶ್ವರ ರಸ್ತೆ, ಎಸ್ಪಿಎಂ ರಸ್ತೆ, ಖಡೆ ಬಜಾರ್, ನಾಥ ಪೈ ಸರ್ಕಲ್, ಬಿಎಂಕೆ ಆಯುರ್ವೇದ ಕಾಲೇಜು ರಸ್ತೆ, ಗೋವಾವೇಸ್ ಮೂಲಕ ಸಂಚರಿಸಿ ಇಸ್ಕಾನ್ ದೇವಾಲಯದ ಬಳಿ ಸಂಜೆ ೬.೩೦ ಕ್ಕೆ ಸಮಾರೋಪಗೊಳ್ಳಲಿದೆ ಎಂದು ಭಕ್ತಿ ರಸಾಮೃತ ಸ್ವಾಮಿಜಿ ತಿಳಿಸಿದರು.
ರಥಯಾತ್ರಾ ಸಮಿತಿಯ ಸಂಯೋಜಕ ಬಾಲಕಿಸನ ಭಟ್ಟಡ, ಗೌರವ ಕಾರ್ಯದರ್ಶಿ ಶ್ವೇತ ನಿತಾಯ್, ನಾರಾಯಣ ಗುರುಂಗ ದಾಸ್, ಅನಂತ ಲಾಡ್, ಪ್ರದೀಪ ಉಂಡಾಳೆ, ಎಚ್.ಡಿ. ಕಾಟವಾ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ